ಜಾತಿಮತಭೇದವಿಲ್ಲದೆ ಎಲ್ಲರಿಂದಲೂ ಮಾನ್ಯರು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರು. ಪ್ರೀತಿಯಿಂದ, ಭಕ್ತಿಯಿಂದ ನಾವೆಲ್ಲ ಗುರುರಾಜರನ್ನು ಕರೆಯುವುದು ’ರಾಯರು’ ಎಂದು. ಈ ರಾಯರು ಎನ್ನುವ ಶಬ್ದದ ಒಂದು ಪುಟ್ಟ ಚಿಂತನೆಯನ್ನು ನೋಡೋಣ.
ಜಾತಿಮತಭೇದವಿಲ್ಲದೆ ಎಲ್ಲರಿಂದಲೂ ಮಾನ್ಯರು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರು. ಪ್ರೀತಿಯಿಂದ, ಭಕ್ತಿಯಿಂದ ನಾವೆಲ್ಲ ಗುರುರಾಜರನ್ನು ಕರೆಯುವುದು ’ರಾಯರು’ ಎಂದು. ಈ ರಾಯರು ಎನ್ನುವ ಶಬ್ದದ ಒಂದು ಪುಟ್ಟ ಚಿಂತನೆಯನ್ನು ನೋಡೋಣ.
ನಾವೆಲ್ಲ ಊರಿನಲ್ಲಿ ಅತ್ಯಂತ ಶ್ರೀಮಂತನಾದ ವ್ಯಕ್ತಿಯನ್ನು ರಾಯ ಎಂದು ಸಂಬೋಧಿಸುವುದು ಉಂಟು. ರಾಮರಾಯ, ಕೃಷ್ಣರಾಯ, ಶಿವರಾಯ ಎಂದು. ಶ್ರೀಮಂತಿಕೆ ಇರುವುದರಿಂದ ಅವನಿಗೆ ರಾಯ ಎಂದು ಕರೆಯುತ್ತೇವೆ. ಈ ರಾಯ ಎನ್ನುವ ಶಬ್ದ ಮೂಲತಃ ಸಂಸ್ಕೃತದ್ದು. ರೈ ಎನ್ನುವುದು. ಸಂಸ್ಕೃತದಲ್ಲಿ ರೈ ಎನ್ನುವ ಶಬ್ದಕ್ಕೆ ಸಂಪತ್ತು ಎನ್ನುವ ಅರ್ಥವಿದೆ. ಲೌಕಿಕದಲ್ಲಿ ಇದು ಹಣವಂತಿಕೆ ಎನ್ನುವ ಅರ್ಥವನ್ನು ಪಡೆಯುತ್ತದೆ. ನಮ್ಮ ರಾಯರ ವಿಷಯಕ್ಕೆ ಬಂದಾಗ ಅವರಲ್ಲಿ ಇರುವುದು ವಿಭಿನ್ನವಾದ ಶ್ರೀಮಂತಿಕೆ. ಭಗವಂತನ ಕಾರುಣ್ಯ, ಭಗವಂತನ ಅನುಗ್ರಹ ಮತ್ತು ಶಾಸ್ತ್ರ ಎನ್ನುವ ಶ್ರೀಮಂತಿಕೆ ಇವರಲ್ಲಿ ಎಲ್ಲರಿಗಿಂತ ಹೆಚ್ಚು ಇದೆ. ಈ ಸಂಪತ್ತು ಇವರಲ್ಲಿ ದೇವೇಂದ್ರನಿಗೆ ಇರುವುದಕ್ಕಿಂತಲೂ ಹೆಚ್ಚು ಎಂದು ಇವರ ಚರಿತ್ರೆಯು ಹೇಳುತ್ತದೆ. ಈ ಶ್ರೀಮಂತಿಕೆ ಇರುವುದರಿಂದಲೇ ನಮಗೆ ಇವರ ಮೇಲೆ ಗೌರವ, ಅಭಿಮಾನ ಮತ್ತು ಪ್ರೀತಿ ಎಲ್ಲರಿಗಿಂತಲೂ ಹೆಚ್ಚು. ಹೀಗಾಗಿ ನಿಜವಾದ ಅರ್ಥದ ರಾಯರು ಮತ್ತು ರೈಗಳು ಇವರೇ.
ಇನ್ನು ಇವರ ಸ್ತುತಿರೂಪವಾದ ಶ್ಲೋಕವನ್ನೊಮ್ಮೆ ಚಿಂತಿಸೋಣ.
ಪೂಜ್ಯಾಯ ರಾಘವೇಂದ್ರಾಯ ಎನ್ನುವ ಶ್ರೀರಾಯರ ಶ್ಲೋಕವನ್ನು ತಿಳಿಯದ ಮನೆ ಮತ್ತು ಮಗು ಇಲ್ಲವೆಂದರೆ ಉತ್ಪ್ರೇಕ್ಷೆಯಲ್ಲ. ನಮ್ಮ ಮನೆಗಳಲ್ಲಿ ದೇವರ ಬಗ್ಗೆ ಏನಾದರೂ ಹೇಳಿಕೊಡುತ್ತೇವೆ ಮಗುವಿಗೆ ಅಂದರೆ, ಅದು ಪೂಜ್ಯಾಯ ರಾಘವೇಂದ್ರಾಯದಿಂದಲೇ ಪ್ರಾರಂಭವಾಗುತ್ತದೆ. ರಾಯರ ವ್ಯಕ್ತಿತ್ವದಷ್ಟೇ ಸರಳ ಈ ಶ್ಲೋಕ. ಅಪ್ಪಣಾಚಾರ್ಯರು ರಾಯರನ್ನು ಕಂಡ ಬಗೆಯನ್ನು ಈ ಶ್ಲೋಕವು ಹೇಳುತ್ತದೆ. ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಎನ್ನುವ ಎರಡು ಹೋಲಿಕೆಗಳು ಇಲ್ಲಿವೆ. ಇವುಗಳ ಮೇಲ್ನೋಟದ ಅರ್ಥವಿಷ್ಟು. ಭಜಿಸುವವರಿಗೆ ಕಲ್ಪವೃಕ್ಷದಂತೆ ಮತ್ತು ನಮಸ್ಕರಿಸುವವರಿಗೆ ಕಾಮಧೇನುವಿನಂತೆ ಎಂದು. ಈ ಎರಡೂ ವಸ್ತುಗಳು ಕೇಳಿದ್ದನ್ನು ಕೊಡುವವು ಎಂದ ಮೇಲೆ ಎರಡೂ ಒಂದೇ ರೀತಿಯವು ಎಂದಾಯಿತು. ಆದರೆ ರಾಯರನ್ನು ಸೇವಿಸುವಾಗ ಅವರನ್ನು ಭಜಿಸುವ ಕ್ರಮದಲ್ಲಿ ಇರುವ ಒಂದು ಸೂಕ್ಷ್ಮವನ್ನು ನಾವು ತಿಳಿಯಬೇಕು. ನಾವೆಲ್ಲರೂ ಕಲ್ಪನೆಗಳನ್ನು ಮಾಡಿಕೊಳ್ಳುವುದರಲ್ಲಿ ಶೂರರು. ಅದರಲ್ಲಿ ಧನಾತ್ಮಕವೂ ಇವೆ, ಋಣಾತ್ಮಕವೂ ಇವೆ. ರಾಯರ ಬಗ್ಗೆಯೂ ಮಿಥ್ಯಾಕಲ್ಪನೆಯನ್ನು ನಾವು ಮಾಡುಕೊಳ್ಳುವ ಅವಕಾಶ ಉಂಟು. ಈ ರೀತಿಯ ಋಣಾತ್ಮಕ ಕಲ್ಪನೆಗಳನ್ನು ಕೊಡಲಿಯಂತೆ ಕತ್ತರಿಸಿರಿ ಎನ್ನುವ ಅರ್ಥದಲ್ಲಿ ಕಲ್ಪ-ವೃಕ್ಷ ಎನ್ನುವ ಶಬ್ದಾರ್ಥವನ್ನು ಅನುಸಂಧಾನ ಮಾಡಬೇಕು. ಹೀಗೆ, ಭಜಿಸುವ ಜನರ ಮನದಲ್ಲಿ ಮೂಡಬಹುದಾದ ಕೆಟ್ಟ ಕಲ್ಪನೆಗಳಿಗೆ ರಾಯರು ಕುಠಾರಪ್ರಾಯರು ಆಗಿದ್ದಾರೆ.
ಈ ರೀತಿಯಾಗಿ ಮನಸ್ಸನ್ನು ಶುಚಿಗೊಳಿಸಿಕೊಂಡು, ತ್ರಿಕರಣಶುದ್ಧಿಪೂರ್ವಕವಾಗಿ ಯಾರು ನಮಸ್ಕಾರ ಮಾಡುತ್ತಾರೆಯೋ ಅವರಿಗೆ ಇವರು ಕಾಮಧೇನುಗಳು. ನಮಿಸುವವನ ಕಾಮನೆಗಳನ್ನು ಇವರು ಪೂರ್ತಿ ಮಾಡುತ್ತಾರೆ. ಕಾಮನೆಗಳು ಎಂದರೆ, ಭೀಮಸೇನನು ಪುರುಷಾರ್ಥಗಳಲ್ಲಿ ಒಪ್ಪಿಕೊಂಡಿರುವ ಕಾಮನೆ ಎಂದರ್ಥ. ಅಂದರೆ, ಸಾತ್ವಿಕ ಕಾಮನೆಗಳು. ಭಗವಂತನನ್ನು ತಿಳಿಯಲು ಬೇಕಾದ ಕಾಮನೆಗಳು. ಈ ರೀತಿಯಾದ ಕಾಮನೆಗಳನ್ನು ನಮಿಸುವವನ ಮೇಲೆ ರಾಯರು ಸುರಿಯುತ್ತಾರೆ. ಸುರಿಯುವುದು ಎನ್ನುವುದಕ್ಕೆ ಸಂಸ್ಕೃತದಲ್ಲಿ ದೋಗ್ಧಿ ಎಂದು ಹೇಳುತ್ತಾರೆ. ಕಾಮಂ ದೋಗ್ಧಿಇತಿ ಕಾಮಧೇನುಃ. ಹಸುವು ಹಾಲನ್ನು ಸುರಿಸಿದರೆ ಇವರು ಕೃಪೆಯನ್ನು ಸುರಿಸುತ್ತಾರೆ. ಹಸುವು ನಾವು ಕೇಳಿದ್ದನ್ನೆಲ್ಲ ಕೊಡುವುದಿಲ್ಲ. ನಮಗೆ ಹಿತವಾಗುವ ಹಾಲನ್ನು ಮಾತ್ರ ಕೊಡುತ್ತದೆ. ಅದೇ ರೀತಿ ನಮ್ಮ ಕೆಟ್ಟ ಕಲ್ಪನೆಗಳನ್ನು ದೂರ ಮಾಡಿ, ನಾವು ಕೇಳುವ ಅರ್ಥಹೀನವಾದ ವರಗಳನ್ನು ಕೊಡದೆ, ನಮಗೆ ಹಿತವನ್ನು ಕೊಡುವ ಕಾಮನೆಗಳನ್ನು ಮಾತ್ರವೇ ಕೊಡುತ್ತಾರೆ. ಈ ಅರ್ಥದಲ್ಲಿ ಕಾಮಧೇನು ಎಂಬ ಅನುಸಂಧಾನವನ್ನು ಮಾಡಬೇಕು.
ಈ ಬಗೆಯಲ್ಲಿ ನಾವೆಲ್ಲರೂ ಈ ಆರಾಧನಾ ಸಂದರ್ಭದಲ್ಲಿ ಚಿಂತನೆಯನ್ನು ಮಾಡಿ ಉದ್ಧೃತರಾಗೋಣ.