Vasudeva Krishna

ವಸುದೇವರಾಗಬಲ್ಲೆವೆ?

ಶ್ರೀಕೃಷ್ಣನು ವಸುದೇವನ ಮನೆಯಲ್ಲಿ ಅವತರಿಸುವನು ಎನ್ನುವ ಚತುರ್ಮುಖನ ಮಾತನ್ನು ಭಾಗವತ ಉಲ್ಲೇಖಿಸಿದೆ. ವಸುದೇವಗೃಹೇ ಸಾಕ್ಷಾದ್ ಭಗವಾನ್ ಪುರುಷಃ ಪರಃ ಜನಿಷ್ಯತೇ ಎನ್ನುವುದಾಗಿ ಆ ಮಾತು. ವ್ಯಾಸರ ಈ ವಾಕ್ಯವನ್ನು ನೋಡಿದಾಗ ಸಹಜವಾಗಿಯೇ ಅರ್ಥವಾಗುವುದು ಗೃಹ ಎಂದರೆ ಮನೆ ಎನ್ನುವ ಅರ್ಥ. ವಸುದೇವನ ಮನೆಯಲ್ಲಿ ಕೃಷ್ಣಾವತಾರ ಎಂದು. ಇಷ್ಟೇ ಅಲ್ಲದೇ ‘ಗೃಹ ಶಬ್ದವನ್ನು ಮನೆಯನ್ನು ಮುನ್ನಡೆಸುವ ಮಡದಿಯಲ್ಲೂ ಪ್ರಯೋಗಿಸುವುದಿದೆ. ಗೃಹಿಣೀ ಗೃಹಮುಚ್ಯತೇ ಎನ್ನುವ ಪ್ರಾಚೀನರ ಮಾತೇ ಇದಕ್ಕೆ ಸಾಕ್ಷಿ. ಹಾಗಾಗಿ ವಸುದೇವನ ಗೃಹದಲ್ಲಿ ಅಂದರೆ ಅವನ ಮಡದಿಯಾದ ದೇವಕಿಯಲ್ಲಿ ಸಾಕ್ಷಾತ್ ಪರಮಪುರುಷ ಕೃಷ್ಣನಾಗಿ ಅವತರಿಸುತ್ತಾನೆ ಎನ್ನುವುದಾಗಿ ವ್ಯಾಸರ ಮಾತಿನ ಆಂತರ್ಯ.

ವೇದವ್ಯಾಸರ ಮಾತಿನ ಅಭಿಪ್ರಾಯ ಕೇವಲ ಇಷ್ಟಕ್ಕೇ ನಿಲ್ಲುವುದಿಲ್ಲ. ವ್ಯಾಸರು ಇದೇ ಭಾಗವತದ ನಾಕನೆಯ ಸ್ಕಂಧದಲ್ಲಿ ವಸುದೇವ ಎನ್ನುವ ಪದವು ಹಲವಾರು ಬಗೆಯಲ್ಲಿ ತೆರೆದುಕೊಳ್ಳುವಂತೆ ಅರ್ಥ ಹೇಳಿದ್ದಿದೆ. ಸತ್ವಂ ವಿಶುದ್ಧಂ ವಸುದೇವಶಬ್ದಿತಂ ಎನ್ನುವುದಾಗಿ. ಇಲ್ಲಿ ವಸುದೇವ ಎಂದರೆ ದೋಷರಹಿತವಾದ ಪರಮಪಾವನವಾದ ಸಾತ್ವಿಕ ಮನಸು ಎನ್ನುವುದು ಒಂದರ್ಥ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ರೋಗಗಳಿಗೆ ತುತ್ತಾಗದ ಮನಸ್ಸೇ ಸಾತ್ವಿಕ ಮನಸ್ಸು. ಈ ಅರ್ಥವನ್ನು ವಸುದೇವ ಎನ್ನುವ ಪದಕ್ಕೆ ಇಟ್ಟುಕೊಂಡಾಗ ದಶಮಸ್ಕಂಧದ ವಸುದೇವನ ಮನೆಯಲ್ಲಿ (ವಸುದೇವ ಗೃಹೇ) ಎನ್ನುವ ಮಾತು ಹೊಸ ಬಗೆಯಲ್ಲಿ ತೆರೆದುಕೊಳ್ಳುವುದು. ಅಂದರೆ ಯಾರ ಮನಸ್ಸು ಕಾಮ-ಕ್ರೋಧಾದಿಗಳಿಗೆ ಬಲಿಯಾಗಲಿಲ್ಲವೋ ಅವರ ಹೃದಯದ ಗರ್ಭಗೃಹದಲ್ಲಿ ಕೃಷ್ಣನ ಅವತಾರವಾಗುವುದು ಎನ್ನುವ ಅರ್ಥ ಲಭ್ಯವಾಗುವುದು.
ಗೃಹ ಎಂದರೆ ಮಡದಿ ಎನ್ನುವ ಅರ್ಥವೂ ಸಹಜವಾದದ್ದೇ. ಗೃಹಿಣಿಯರು ಗರ್ಭಿಣಿಯರಾದ ಸಂದರ್ಭದಲ್ಲಿ ಲೋಕವಾರ್ತೆಯಿಂದ ಆದಷ್ಟು ವಿಮುಖರಾಗಿ ಲೋಕಾಧ್ಯಕ್ಷನ ಚಿಂತನೆಯಲ್ಲಿ ತೊಡಗಬೇಕು. ಆಗ ಮಾತ್ರ ಅವರು ವಸುದೇವ (ಸಾತ್ವಿಕ ಮನಸ್ಸುಳ್ಳವರಾಗುವುದು ಸಾಧ್ಯ) ರಾಗುವುದು ಸಾಧ್ಯ. ಇಂತಹ ವಸುದೇವರಾದವರ ಗರ್ಭದಲ್ಲಿ ಶ್ರೀಕೃಷ್ಣನ ವಿಶೇಷ ಸನ್ನಿಧಾನವುಳ್ಳ ಮಕ್ಕಳು ಹುಟ್ಟುವುದು ಸಾಧ್ಯ. ಎನ್ನುವ ಚಿಂತನೆಯೂ ಇಲ್ಲಿದೆ.

ಹೃದಯದಲ್ಲೇ ಇರುವ ದೇವರು ನಮಗ್ಯಾಕೆ ಕಾಣಿಸುವುದಿಲ್ಲ? ಎನ್ನುವ ಆಕ್ಷೇಪಕ್ಕೂ ಭಾಗವತದ ಮೇಲಿನ ಈ ಮಾತೇ ಉತ್ತರವಾಗುತ್ತದೆ. ನಮ್ಮ ಹೃದಯವು ಶುದ್ಧವಿಲ್ಲದ ಕಾರಣ ಪರಿಶುದ್ಧನಾದ ಭಗವಂತ ಕಾಣಿಸಿಕೊಳ್ಳುವುದಿಲ್ಲ. ಭಗವಂತನು ಕಾಣಿಸಿಕೊಳ್ಳುವುದು ವಸುದೇವರ(ಸಜ್ಜನರ) ಮನಸ್ಸಿನಲ್ಲಿ. ಹೃದಯದ ಕೊಳೆ ಕಳೆದುಕೊಂಡು ಪ್ರತಿಯೊಬ್ಬರೂ ವಸುದೇವರಾದಾಗ ಪ್ರತಿಯೊಬ್ಬರ ಹೃದಯದಲ್ಲೂ ಕೃಷ್ಣಾವತಾರವಾಗುವುದು.

ಚಿತ್ರಕೃಪೆ : ವಿಕಿಪಿಡಿಯ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.