Palimaru Bale Muhurta

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಬಾಳೆ ಮುಹೂರ್ತ

ವಿತ್ರ ಭಾರತಾವನಿಯಲ್ಲಿ ವಿಶಿಷ್ಟಸ್ಥಾನವನ್ನು ಪಡೆದ ಕ್ಷೇತ್ರ – ಉಡುಪಿ. ಶ್ರೀಪರಶುರಾಮದೇವರಿಂದ ನಿರ್ಮಾಣಗೊಂಡ ಇಂದಿನ ಮಹರಾಷ್ಟ್ರದ ಕಲ್ಯಾಣದಿಂದ ಸಹ್ಯಾದ್ರಿತಪ್ಪಲಿನಲ್ಲಿ ಹಬ್ಬಿಕೊಂಡು ಕನ್ಯಾಕುಮಾರಿಯವರೆಗಿನ ಪಡುಗಡಲತಡಿಯ ಕ್ಷೇತ್ರಗಳಲ್ಲಿ ಪ್ರಧಾನವಾದುದು. ಎಂಟುನೂರು ವರ್ಷಗಳ ಹಿಂದೆ “ಶಿವಬೆಳ್ಳಿ” ಎಂದು ಕರೆಯಲ್ಪಟ್ಟಿತ್ತು. ಸಂಸ್ಕೃತದಲ್ಲಿ “ಶಿವರೂಪ್ಯ” ಎಂದು ಪ್ರಸಿದ್ಧವಾಗಿತ್ತು. ಶ್ರೀಮದ್ವಾದಿರಾಜ ಶ್ರೀಮಚ್ಚರಣರು ಉಲ್ಲೇಖಿಸಿದಂತೆ “ಮಹೇಶರಜತ” ಎಂದೂ ಪ್ರಸಿದ್ಧವಾಗಿತ್ತು. ಪೌರಾಣಿಕ ಐತಿಹ್ಯದಂತೆ ಶ್ರೀಪರಶುರಾಮದೇವರು ಸಮುದ್ರರಾಜರಿಂದ ಪಡೆದ ಭೂಭಾಗವನ್ನು ರಾಮಭೋಜ ಎಂಬ ರಾಜನಿಗೆ ನೀಡಿದ್ದರು. ಆ ರಾಮಭೋಜರಾಜನು ಒಂದು ಬಾರಿ “ಅಶ್ವಮೇಧ”ವನ್ನು ಮಾಡುವಾಗ ಶ್ರೀಪರಶುರಾಮದೇವರನ್ನೇ ಅಧ್ವರ್ಯುವನ್ನಾಗಿ ಆಹ್ವಾನಿಸಿದನು. ಆಗಮಿಸಿದ ಶ್ರೀಪರಶುರಾಮದೇವರಿಗೆ ಬೆಳ್ಳಿಯ ಮಣೆಯೊಂದನ್ನು ತಯಾರಿಸಿ ಸಮರ್ಪಿಸಿದನು. ಯಾಗದ ಸಮಯದಲ್ಲಿ ಶ್ರೀಪರಶುರಾಮದೇವರು ಆ ರಜತಮಣೆಯಲ್ಲೇ ಕುಳಿತಿದ್ದರು. ಯಾಗದ ನಂತರ ಆ ಬೆಳ್ಳಿಯ ಮಣೆಯು ಅದೃಶ್ಯವಾಯಿತು. ಆ ಸ್ಥಳದಲ್ಲಿ ಲಿಂಗವೊಂದು ಉದ್ಭವಿಸಿತು. ಆ ಲಿಂಗದೊಳಗೆ ಸಾಕ್ಷಾತ್ ಭಗವಂತನಾದ ಪರಶುರಾಮದೇವರೇ ಸನ್ನಿಹಿತರಾಗಿದ್ದಾರೆ. ಈ ಸನ್ನಿಧಾನವೇ ಶ್ರೀಅನಂತೇಶ್ವರ ದೇವರೆಂದು ಪ್ರಚಲಿತವಾಗಿರುವುದು. ಈ ಹಿನ್ನೆಲೆಯಲ್ಲಿಯೇ ರೌಪ್ಯಪೀಠ ಅಥವಾ ರಜತಪೀಠ ಎಂಬ ಹೆಸರು ಬಂದಿತು. ಒಟ್ಟಿನಲ್ಲಿ ವೇದಾದ್ರಿ ಹಾಗು ರಜತಪೀಠಗಳಿಗೆ ಒಡೆಯನಾದ ಶ್ರೀಅನಂತಾಸನನೇ ಈ ಕ್ಷೇತ್ರದ ಅಧಿಪತಿಯಾಗಿರುವನು.

ಅನಂತೇಶ್ವರ ಹಾಗು ಚಂದ್ರೇಶ್ವರ ದೇವಸ್ಥಾನಗಳಿಂದ ಕೂಡಿದ ರಥಬೀದಿಯಲ್ಲಿ ಸುತ್ತಲೂ ಎಂಟು ಮಠಗಳಿವೆ. ಪೂರ್ವದಲ್ಲಿ ಕಾಣಿಯೂರುಮಠ, ಆಗ್ನೇಯದಲ್ಲಿ ಸೋದೆಮಠ, ದಕ್ಷಿಣದಲ್ಲಿ ಪುತ್ತಿಗೆಮಠ, ನೈಋತ್ಯದಲ್ಲಿ ಅದಮಾರುಮಠ, ಪಶ್ಚಿಮದಲ್ಲಿ ಪೇಜಾವರಮಠ ಹಾಗೂ ಪಲಿಮಾರುಮಠ, ಉತ್ತರದಲ್ಲಿ ಕೃಷ್ಣಾಪುರಮಠ ಹಾಗು ಶೀರೂರುಮಠಗಳಿವೆ. ಅಲ್ಲದೆ ಭಂಡಾರಕೇರಿಮಠ, ಭೀಮನಕಟ್ಟೆಮಠ, ರಾಯರಮಠ, ಉತ್ತರಾದಿಮಠ, ಶ್ರೀಪಾದರಾಜಮಠ, ವ್ಯಾಸರಾಜಮಠಗಳೂ ಈ ರಥಬೀದಿಯಲ್ಲಿವೆ. ಅನಂತೇಶ್ವರ ಹಾಗೂ ಚಂದ್ರೇಶ್ವರ ದೇವಸ್ಥಾನಗಳ ಉತ್ತರದಲ್ಲಿ ಶ್ರೀಕೃಷ್ಣ ಮತ್ತು ಶ್ರೀಮುಖ್ಯಪ್ರಾಣದೇವರ ಸನ್ನಿಧಾನವೆನಿಸಿದ ಶ್ರೀಕೃಷ್ಣಮಠವಿದೆ. ಶ್ರೀಕೃಷ್ಣಮಠದ ಪೂರ್ವದಿಗ್ಭಾಗದಲ್ಲಿ ಮಧ್ವಸರೋವರವಿದೆ. ಪ್ರಾಚೀನಕಾಲದಲ್ಲಿ ಅನಂತಸರೋವರವೆಂದು ಪ್ರಸಿದ್ಧವಾಗಿತ್ತು. ಶ್ರೀಅಚ್ಯುತಪ್ರೇಕ್ಷಾಚಾರ್ಯರ ಅಪೇಕ್ಷೆಯಂತೆ ಶ್ರೀಮಧ್ವಾಚಾರ್ಯರು ಬದರೀಯಾತ್ರೆಗೆ ಹೋಗದೇ ಉಡುಪಿಯಲ್ಲಿಯೇ ನೆಲೆಸಿದಾಗ ಶ್ರೀಮಧ್ವಾಚಾರ್ಯರಿಗಾಗಿಯೇ ಗಂಗಾದೇವಿಯು ಅನಂತಸರೋವರಕ್ಕೆ ಆಗಮಿಸಿದಳು. ಬಂದಂತಹ ಗಂಗೆಯಲ್ಲಿ ಎಲ್ಲಾ ಭಕ್ತರು ಶ್ರೀಮದಾಚಾರ್ಯರಿಂದೊಡಗೂಡಿ ಮಿಂದು ಪುನೀತರಾದರು. ಅಂದಿನಿಂದ “ಮಧ್ವಸರೋವರ” ಎಂದೇ ಪ್ರಖ್ಯಾತವಾಯಿತು. ಅಂತೆಯೇ ಪ್ರತೀ ಹನ್ನೆರಡು ವರ್ಷಗಳಿಗೊಮ್ಮೆ ಗಂಗಾದೇವಿಯು ಈ ಸರೋವರದಲ್ಲಿ ಪ್ರಕಟವಾಗುವಳು. ಈ ಹಿನ್ನೆಲೆಯಲ್ಲಿ ಪ್ರಾತಃಸ್ಮರಣೀಯರಾದ ಶ್ರೀಅದಮಾರುಮಠದ ಶ್ರೀ ಶ್ರೀ ವಿಭುದಪ್ರಿಯತೀರ್ಥರು ಭಾಗೀರಥಿಯನ್ನು ಪ್ರತಿಷ್ಠಾಪಿಸಿದರು. ಗಂಗೆಯು ಪ್ರಕಟಗೊಂಡಂತಹ ಸನ್ನಿವೇಶವನ್ನು ಕಂಡ ಅನೇಕ ಪುಣ್ಯಾತ್ಮರ ಮಾತುಗಳಿಗೆ ಸಾಕ್ಷಿಯಾದವರು ಶುದ್ಧಜಲಸ್ವರೂಪ ಗಂಗಾದರ್ಶನ ಭಾಗ್ಯಶಾಲಿಗಳಾದ ಗುರು ಶ್ರೀ ಶ್ರೀವಿದ್ಯಾಮಾನ್ಯತೀರ್ಥಶ್ರೀಪಾದರು. ಕಲಿಬಾಧೆಯಿಂದ ತತ್ವಜ್ಞಾನವು ಮಂಕಾಗುವ ಸಂದರ್ಭದಲ್ಲಿ ದೇವತೆಗಳಿಂದ ಪ್ರಾರ್ಥಿತರಾಗಿ ಹಾಗು ಭಗವಂತನಿಂದ ಆಜ್ಞಪ್ತರಾದ ಜಗಜ್ಜೀವನರಾದ ಶ್ರೀಮುಖ್ಯಪ್ರಾಣದೇವರು ಈ ಉಡುಪಿ ಅನಂತಾಸನನಿಗೆ ಪ್ರಣಾಮಗಳನ್ನು ಅರ್ಪಿಸಿ ಪಾಜಕಕ್ಷೇತ್ರದಲ್ಲಿರುವ ಮಧ್ಯಗೇಹ ದಂಪತಿಗಳ ಮಗನಾಗಿ ಅವತರಿಸಿದರು. ತತ್ವಜ್ಞಾನದ ರಕ್ಷಣೆಗಾಗಿಯೇ ಬಂದ ಮುಖ್ಯಪ್ರಾಣದೇವರಾದ್ದರಿಂದ ವಾಸುದೇವ ಎಂಬ ಅಬಿಧಾನದಿಂದ ತಮ್ಮ ಆಶ್ರಮೋಚಿತವಾದ ಲೇಲೆಗಳನ್ನು ತೋರುತ್ತಾ ಶ್ರೀ ಅಚ್ಯುತಪ್ರೇಕ್ಷಾಚಾರ್ಯರ ಬಳಿ ಸನ್ಯಾಸವನ್ನು ಪಡೆದು ಶ್ರೀಪೂರ್ಣಪ್ರಜ್ಞತೀರ್ಥರೆನಿಸಿದರು. ತಮ್ಮ ಅವತಾರದ ಉದ್ದೇಶಗಳನ್ನು ಪೂರ್ಣಮಾಡುತ್ತಾ ಆನಂದತೀರ್ಥ, ಅನುಮಾನತೀರ್ಥ ಎಂಬ ಅನ್ವರ್ಥನಾಮಗಳೊಂದಿಗೆ ಶಾಸ್ತ್ರೀಯ ಹಾಗೂ ಸಮಾಜಿಕವಾದ ಕ್ರಾಂತಿಯನ್ನು ಮಾಡಿ ತತ್ವವಾದವನ್ನು ಸ್ಥಾಪಿಸಿದರು. ಸಜ್ಜನರಿಗೆ ಸನ್ಮಾರ್ಗವನ್ನು ತೋರಿದರು.

ಅಂತೆಯೇ ಹದಿಮೂರನೇ ಶತಮಾನದ ಕೊನೆಯ ದಶಕದಲ್ಲಿ ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಜಗದೊಡೆಯನಾದ ಶ್ರೀಕೃಷ್ಣನು ಶ್ರೀಮದಾಚಾರ್ಯರಿಗೆ ದೊರೆತದ್ದು ಮಾತ್ರ ಒಂದು ವಿಶಿಷ್ಟ ಸನ್ನಿವೇಶವಾಗಿದೆ. ಅದರ ಹಿನ್ನೆಲೆಯೂ ಅಷ್ಟೇ ರೋಚಕವಾಗಿದೆ. ಶ್ರೀಪಲಿಮಾರುಮಠದ ಪ್ರಾತಃಸ್ಮರಣೀಯರಾದ ಶ್ರೀ ಶ್ರೀ ರಘುವರ್ಯತೀರ್ಥರು ದಾಖಲಿಸಿದ ಮಾತುಗಳಂತೆ ತಾಯಿ ದೇವಕಿಯ ಬಯಕೆಯಂತೆ ಹಾಗು ಮಡದಿ ರುಗ್ಮಿಣಿದೇವಿಯರ ಪ್ರಾರ್ಥನೆಯಂತೆ ಕಡಗೋಲು ಮತ್ತು ನೇಣುಗಳನ್ನು ಹಿಡಿದು ನಿಂತ ಬಾಲರೂಪದ ದ್ವಾರಕಾಧೀಶ. ಆ ಮುದ್ದುರೂಪವನ್ನೇ ನಿತ್ಯನೋಡುವ ಹಿರಿದಾಸೆ ರುಗ್ಮಿಣಿಯದ್ದು. ಅದಕ್ಕಾಗಿ ದೇವಶಿಲ್ಪಿ ವಿಶ್ವಕರ್ಮನಿಂದ ರಚಿತವಾಯಿತು ಶಾಲಗ್ರಾಮಶಿಲೆಯ ವಿಗ್ರಹ. ಈ ವಿಗ್ರಹದಲ್ಲಿ ನೆಲೆನಿಂತ ಶ್ರೀಕೃಷ್ಣ. ಅದು ಅಂದು ಶ್ರೀರುಗ್ಮಿಣೀಕರಪೂಜಿತವೂ ಆಯಿತು. ನಂತರ ಅರ್ಜುನನ ಬಳಿಯಲ್ಲಿ ಇತ್ತು. ಅವತಾರ ಸಮಾಪ್ತಿಯಲ್ಲಿ ದ್ವಾರಕೆಯ ಮಣ್ಣು ಗೋಪೀಚಂದನ ಹೆಂಟೆಯಲ್ಲಿ ಲೀನವಾಯಿತು. ಶ್ರೀಕೃಷ್ಣವಿಗ್ರಹವಿದ್ದ ಗೋಪೀಚಂದನಗಡ್ಡೆ ದ್ವಾರಕೆಯಿಂದ ಹಡಗಿನ ಮೂಲಕ ಉಡುಪಿಯಿಂದ ೬ ಕಿಲೋಮೀಟರ್ ದೂರವಿರುವ ಮಲ್ಪೆಯ ಸಮುದ್ರಕ್ಕೆ ಬಂದಿತು. ಬಿರುಗಾಳಿಯ ರಭಸಕ್ಕೆ ಹಡಗು ಮುಳುಗಿತು. ಶ್ರೀಕೃಷ್ಣವಿಗ್ರಹ ಸಮುದ್ರರಾಜನ ಬಳಿ ಸೇರಿತು. ಇದನ್ನು ತಿಳಿದು ಬಂದ ಶ್ರೀಮಧ್ವಾಚಾರ್ಯರಿಗೆ ಸ್ವತಃ ವರುಣದೇವರೇ ಶ್ರೀಕೃಷ್ಣವಿಗ್ರಹ ನೀಡಿದರು. ತನಗಾಗಿ ಬಂದ ಕಡುಮುದ್ದುಶ್ರೀಕೃಷ್ಣನನ್ನು ಕೈಯಾರೆ ಎತ್ತಿ ಪ್ರೀತಿಯಿಂದ ಕೊಂಡಾಡುತ್ತಾ ಉಡುಪಿಗೆ ತಂದ ಶ್ರೀಮದಾಚಾರ್ಯರು ಉತ್ತರಾಯಣ ಪರ್ವಕಾಲದಲ್ಲಿ ಪ್ರತಿಷ್ಠಾಪಿಸಿದರು. ಹದಿನಾಲ್ಕು ಲೋಕದೊಡೆಯನಾದ ಶ್ರೀಕೃಷ್ಣನನ್ನು ಪೂಜಿಸಲು ಮತ್ತು ಅವನ ಸರ್ವೋತ್ತಮತ್ವವನ್ನು ಪ್ರತಿಪಾದಿಸಿ ಪ್ರಪಂಚದ ವಾಸ್ತವತೆಯನ್ನು ಸಾರುತ್ತಾ ಬದುಕನ್ನು ಹಸನಾಗಿಸುವ ಮಾರ್ಗವನ್ನು ಸಮಾಜದ ಎಲ್ಲ ಬಂಧುಗಳಿಗೂ ತೋರಲು ಎಂಟು ಬಾಲಸನ್ಯಾಸಿಗಳನ್ನು ನೇಮಕಗೊಳಿಸಿದರು. ಒಬ್ಬೊಬ್ಬ ಸ್ವಾಮಿಗಳು ಎರಡು ತಿಂಗಳುಗಳ ಪೂಜಾಧಿಕಾರ ಪಡೆಯುವಂತೆ ಆದೇಶಿಸಿದರು. ಹೀಗೆ ಎರಡು ತಿಂಗಳುಗಳ ಪೂಜಾಧಿಕಾರ ಹಸ್ತಾಂತರವಾಗುವ “ಪರ್ಯಾಯ” ವ್ಯವಸ್ಥೆ ಆರಂಭಗೊಂಡಿತು.

ಶ್ರೀಮದಾಚಾರ್ಯರ ಆದೇಶದಂತೆ ಶ್ರೀಕೃಷ್ಣಪೂಜಾಪರ್ಯಾಯಾಧಿಕಾರ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬಂದ ಅವರ ಸಾಕ್ಷಾತ್ ಶಿಷ್ಯರು ಶ್ರೀಪಲಿಮಾರುಮಠದ ಶ್ರೀ ಶ್ರೀಹೃಷೀಕೇಶತೀರ್ಥರು, ಶ್ರೀಅದಮಾರುಮಠದ ಶ್ರೀ ಶ್ರೀನರಸಿಂಹತೀರ್ಥರು, ಶ್ರೀಕೃಷ್ಣಾಪುರಮಠದ ಶ್ರೀ ಶ್ರೀಜನಾರ್ದನತೀರ್ಥರು, ಶ್ರೀಪುತ್ತಿಗೆಮಠದ ಶ್ರೀ ಶ್ರೀಉಪೇಂದ್ರತೀರ್ಥರು, ಶ್ರೀಶೀರೂರುಮಠದ ಶ್ರೀ ಶ್ರೀವಾಮನತೀರ್ಥರು, ಶ್ರೀಸೋದೆಮಠದ ಶ್ರೀ ಶ್ರೀವಿಷ್ಣುತೀರ್ಥರು (ಇವರು ಶ್ರೀಮದಾಚಾರ್ಯರ ಪೂರ್ವಾಶ್ರಮದ ಸೋದರರೂಕೂಡಾ), ಶ್ರೀಕಾಣಿಯೂರುಮಠದ ಶ್ರೀ ಶ್ರೀರಾಮತೀರ್ಥರು, ಹಾಗು ಶ್ರೀಪೇಜಾವರಮಠದ ಶ್ರೀ ಶ್ರೀಅಧೋಕ್ಷಜತೀರ್ಥರು. ಈ ರೀತಿ ಮೇಲಿನ ಎಂಟೂ ಸನ್ಯಾಸಿ ಶಿಷ್ಯರು ಶ್ರೀಮದಾಚಾರ್ಯರ ಆದೇಶದಂತೆ ಶ್ರೀಕೃಷ್ಣಮಠದಲ್ಲೇ ಜೊತೆಯಲ್ಲೇ ನೆಲೆಸಿದ್ದರು. ಎರಡು ತಿಂಗಳ ಅವಧಿಯ ಪರ್ಯಾಯದಂತೆ ಶ್ರೀಕೃಷ್ಣಪೂಜೆಯನ್ನು ನಡೆಸುತ್ತಿದ್ದರು. ಮುಂದೆ ೧೪೮೦-೧೬೦೦ ವರ್ಷಗಳ ಅವಧಿಯ ಶ್ರೀ ಶ್ರೀಮದ್ವಾದಿರಾಜಶ್ರೀಮಚ್ಚರಣರು ಎರಡು ತಿಂಗಳ ಪರ್ಯಾಯದ ಅವಧಿಯನ್ನು ಎರಡುವರ್ಷಗಳಿಗೆ ವಿಸ್ತರಿಸಿದರು.

ಹದಿನಾರನೇ ಶತಮಾನದಲ್ಲಿ ಶ್ರೀಶ್ರೀಮದ್ವಾದಿರಾಜ ಶ್ರೀಮಚ್ಚರಣರಿಂದ ಆರಂಭಗೊಂಡ ಈ ಪರ್ಯಾಯದ ಆವೃತ್ತಗಳಲ್ಲಿ ಮೂವತ್ತೊಂದನೇ ಆವೃತ್ತವು ಶ್ರೀಪೇಜಾವರಮಠದ ಪರ್ಯಾಯದೊಂದಿಗೆ, ಅಂದರೆ ೨೦೧೬-೨೦೧೭ರಂದು ಸಂಪನ್ನವಾಗುವುದು. ಮೂವತ್ತೆರಡನೇ ಸುತ್ತಿನ ಮೊತ್ತಮೊದಲ ಪರ್ಯಾಯ ಶ್ರೀಪಲಿಮಾರುಮಠದ ಪರ್ಯಾಯ. ೨೦೧೮ – ಜನವರಿ ೧೮ರಿಂದ ಆರಂಭಗೊಳ್ಳುವುದು. ಹೀಗೆ ಅಷ್ಟಮಠದ ಯತಿಗಳು ಎರಡು ವರ್ಷಗಳಿಗೊಮ್ಮೆ ಶ್ರೀಕೃಷ್ಣಪೂಜೆಯ ಅಧಿಕಾರ ವಹಿಸಿಕೊಂಡು ಶ್ರೀಕೃಷ್ಣಮುಖ್ಯಪ್ರಾಣರನ್ನು ಪೂಜಿಸಿ ಶಾಸ್ತ್ರೀಯ-ಧಾರ್ಮಿಕ ಚಟುವಟಿಕೆಗಳೊಂದಿಗೆ ಅನ್ನದಾನ – ಜ್ಞಾನಯಜ್ಞ – ಆರೋಗ್ಯವರ್ಧನೆ – ಗೋಸಂರಕ್ಷಣೆ – ವಿದ್ಯಾಪ್ರಸಾರ ಮೊದಲಾದ ಅನೇಕ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾರೆ.

ಒಮ್ಮೆ ಈ ತೆರನಾದ ಅಧಿಕಾರಪಡೆದ ಯತಿಗಳು ಮತ್ತೊಮ್ಮೆ ಈ ಅವಕಾಶ ಪಡೆಯುವುದು ಹದಿನಾಲ್ಕು ವರ್ಷಗಳ ನಂತರವೇ!. ಈ ರೀತಿ ಸರದಿಯಿಂದ ಶ್ರೀಕೃಷ್ಣಪೂಜಾ ಅಧಿಕಾರ ಹಸ್ತಾಂತರವೇ “ಪರ್ಯಾಯಮಹೋತ್ಸವ“.

ಒಬ್ಬ ಯತಿಗಳು ಸರ್ವಜ್ಞಪೀಠವೇರಿದ ಬಳಿಕ ಮುಂದಿನ ಪರ್ಯಾಯಪೀಠವನ್ನೇರುವ ಇನ್ನೊಬ್ಬ ಯತಿಗಳು ಪರ್ಯಾಯಕ್ಕೆ ಸರಿಯಾಗಿ ಹದಿಮೂರು ತಿಂಗಳ ಮುಂಚಿತವಾಗಿ, ಅಂದರೆ ವೃಶ್ಚಿಕಮಾಸದಲ್ಲಿ ತಮ್ಮ ಪರ್ಯಾಯ ಪೂರ್ವಭಾವಿ ತಯಾರಿಯನ್ನು ಆರಂಭಿಸುತ್ತಾರೆ. ತಯಾರಿಗಳ ಸಂಕೇತಗಳೇ ಅನೇಕ ಮುಹೂರ್ತಗಳು. ಅದರಲ್ಲಿ ಮೊದಲನೆಯದ್ದು “ಬಾಳೆಮುಹೂರ್ತ – ತುಳಸೀಮುಹೂರ್ತ”. ಶ್ರೀಮದ್ವಾದಿರಾಜಶ್ರೀಮಚ್ಚರಣರು ಬೆಳೆಸಿದ ಸಂಪ್ರದಾಯದಂತೆ ವೃಶ್ಚಿಕಮಾಸದಲ್ಲಿ ಶುಭಮುಹೂರ್ತದಂದು ಭಾವೀಪರ್ಯಾಯಪೀಠಾಧೀಶರ ಅಣತಿಯಂತೆ ತಮ್ಮ ಮಠದ ಪಟ್ಟದದೇವರ ಸನ್ನಿಧಿಯಲ್ಲಿ ಫಲನ್ಯಾಸದಿಂದ ಪ್ರಾರ್ಥಿಸುತ್ತಾರೆ. ಅನಂತರ ನವಗ್ರಹಾರಾಧನೆ ಬಳಿಕ ಶ್ರೀಮಠದ ದಿವಾನರು, ವಿದ್ವಾಂಸರು, ಪುರೋಹಿತರು, ಮಠದ ಅಭಿಮಾನಿಗಳು – ಮೆರವಣಿಗೆಯ ಮೂಲಕ ಹೊರಡುತ್ತಾರೆ. ಮೊದಲು ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿರುವ ಶ್ರೀಮಹರುದ್ರದೇವರನ್ನು ಮತ್ತು ಮಹಾಗಣಪತಿಯನ್ನು ದರ್ಶಿಸಿ, ಪ್ರಾರ್ಥಿಸಿ, ಪೂಜೆಯನ್ನು ಪೂರೈಸಿಕೊಂಡು ಕಾಣಿಕೆಯನ್ನು ಅರ್ಪಿಸಿ, ಪ್ರಸಾದವನ್ನು ಸ್ವೀಕರಿಸುತ್ತಾರೆ. ಮುಂದಿನ ಎರಡುವರ್ಷಗಳ ಪರ್ಯಾಯದ ಕಾರ್ಯಕ್ರಮಗಳನ್ನು ನಿರ್ವಿಘ್ನವಾಗಿ ಸಾಂಗವಾಗಿ ನೆರವೇರುವಂತೆ ಕೋರುತ್ತಾರೆ. ಅನಂತರ ಅನಂತೇಶ್ವರ ಸನ್ನಿಧಿಗೆ ಬಂದು ಅಲ್ಲಿರುವ ಶ್ರೀಮದನಂತಾಸನನನ್ನು, ಶ್ರೀಮಧ್ವಾಚಾರ್ಯರನ್ನು, ಮಹಾಗಣಪತಿಯನ್ನು ದರ್ಶಿಸಿ, ಪ್ರಾರ್ಥಿಸಿ, ಪೂಜೆಯನ್ನು ಅರ್ಪಿಸಿ, ಕಾಣಿಕೆಯನ್ನು ಅರ್ಪಿಸಿ, ಪ್ರಸಾದವನ್ನು ಸ್ವೀಕರಿಸುತ್ತಾರೆ. ಅಲ್ಲಿಯೂ ಅಂತರಂಗದ ಭಾವನೆಯನ್ನು ವ್ಯಕ್ತಪಡಿಸಿ ಕಾರ್ಯಕ್ರಮದ ನಿರ್ವಿಘ್ನತೆಗಾಗಿ ಪ್ರಾರ್ಥಿಸುತ್ತಾರೆ. ಅನಂತರ ಶ್ರೀಕೃಷ್ಣಮಠಕ್ಕೆ ಬಂದು ಶ್ರೀಕೃಷ್ಣನ ಮುಂಭಾಗದಲ್ಲಿರುವ ನವಗ್ರಹಕಿಂಡಿಯ ಬಳಿ ಫಲನ್ಯಾಸವನ್ನು ಮಾಡಿ ಮುಂಬರುವ ಎರಡು ವರ್ಷದ ಪರ್ಯಾಯವು ನಿರ್ವಿಘ್ನವಾಗಿ ನಡೆಯಲಿ ಎಂದು ಪ್ರಾರ್ಥಿಸಿ, ಕಾಣಿಕೆಯನ್ನು ಅರ್ಪಿಸಿ ಶ್ರೀಮುಖ್ಯಪ್ರಾಣದೇವರನ್ನು, ಶ್ರೀಮದ್ವಾದಿರಾಜಗುರುಪ್ರತಿಷ್ಠಿತ ಶ್ರೀಮಧ್ವಾಚಾರ್ಯರನ್ನು, ಗರುಡದೇವರನ್ನು ಪ್ರಾರ್ಥಿಸಿ ಸರ್ವಜ್ಞಸಿಂಹಾಸನದಲ್ಲಿ ಫಲವನ್ನಿಟ್ಟು ಪ್ರಾರ್ಥಿಸುತ್ತಾರೆ. ತದನಂತರ ಭೋಜನಶಾಲೆಯ ಶ್ರೀಮುಖ್ಯಪ್ರಾಣದೇವರು ಶ್ರೀಸುಬ್ರಹ್ಮಣ್ಯದೇವರು ಶ್ರೀನವಗ್ರಹದೇವರನ್ನು ದರ್ಶಿಸಿ, ತಮ್ಮ ಮಠದ ಪೂರ್ವಗುರುಗಳ ಸನ್ನಿಧಿಯಾದ ವೃಂದಾವನಕ್ಕೆ ಆಗಮಿಸಿ ಗುರುಗಳಿಗೆ ಪ್ರದಕ್ಷಿಣೆಸಹಿತ ನಮನಗಳನ್ನು ಅರ್ಪಿಸುತ್ತಾರೆ. ಮುಂಬರುವ ಎಲ್ಲ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನಡೆಯುವಂತೆ ಅನುಗ್ರಹಿಸಲು ಪ್ರಾರ್ಥಿಸುತ್ತಾರೆ.

ಮತ್ತ್ತೆ ಮಠಕ್ಕೆ ಆಗಮಿಸಿ ಅಲ್ಲಿಂದ ಎಲ್ಲಾ ದೇವರ ಪ್ರಸಾದದೊಂದಿಗೆ ವಾದ್ಯ-ವೇದ-ಮಂಗಲಘೋಷಗಳೊಂದಿಗೆ ಬಾಳೆಗಿಡ, ತುಳಸೀಗಿಡ, ಕಬ್ಬು ಮೊದಲಾದ ಸಸ್ಯಸಂಪತ್ತನ್ನು ಮೆರವಣಿಗೆಯ ಮೂಲಕ ನಿಗದಿಯಾದ ತಮ್ಮ ಮಠದ ಅನುಬಂಧಿಯಾದ ಸ್ಥಳಕ್ಕೆ ಕೊಂಡೊಯ್ಯುತ್ತಾರೆ. ಪುಣ್ಯಾಹಾದಿಗಳಿಂದ ಶುದ್ಧೀಕರಿಸಿದ ಪವಿತ್ರಭೂಮಿಯಲ್ಲಿ ಭಗವಂತನನ್ನು, ಗುರುಗಳನ್ನು, ದೇವತೆಗಳನ್ನು ಸ್ಮರಿಸುತ್ತಾ ಬಾಳೆಗಿಡ ಮೊದಲಾದವುಗಳನ್ನು ನೆಡುವುದಕ್ಕೆ ಚಾಲನೆ ನೀಡುತ್ತಾರೆ. ಪರ್ಯಾಯ ಪೀಠಾಧೀಶರ ಪ್ರತಿನಿಧಿಯಾದ ವಿದ್ವಾಂಸರಿಗೆ ಮತ್ತೆ ಅಷ್ಠಮಠಗಳ ಪ್ರತಿನಿಧಿಗಳಾದ ವಿದ್ವಾಂಸರಿಗೆ ನವಧಾನ್ಯಗಳನ್ನು ದಾನ ಮಾಡುತ್ತಾರೆ. ಅಂತೆಯೇ ಉಳಿದ ಮಠಗಳ ಪ್ರತಿನಿಧಿಗಳಾದ ವಿದ್ವಾಂಸರಿಗಳಿಗು ಫಲದಾನವನ್ನು ಮಾಡುತ್ತಾರೆ. ಹೀಗೆ ತಮ್ಮ ಪರ್ಯಾಯದ ಅವಧಿಯಲ್ಲಿ ನಿರಂತರವಾಗಿ ನಡೆಯುವ ಅನ್ನದಾನಕ್ಕಾಗಿ ಬೇಕಾಗುವ ಎಲೆಗಾಗಿ ಬಾಳೆಗಿಡಗಳನ್ನು, ಅರ್ಚನೆಗಾಗಿ ತುಳಸೀಗಿಡಗಳನ್ನು ನೆಡುವ ಮುಹೂರ್ತ ಮೊದಲ ಮುಹೂರ್ತ.

ಪ್ರಸ್ತುತ ಉಡುಪಿಯ ವೈಭವದ ಪರ್ಯಾಯದ ಮೂವತ್ತೆರಡನೇ ಸುತ್ತಿನ ಮೊದಲ ಪರ್ಯಾಯವೆನಿಸಿದ ಶ್ರೀಪಲಿಮಾರುಮಠದ ಪರ್ಯಾಯದ ಪೂರ್ವಭಾವಿಯಾಗಿ ಬಾಳೆ-ತುಳಸೀಮುಹೂರ್ತವು ದುರ್ಮುಖನಾಮ ಸಂವತ್ಸರದ ಮಾರ್ಘಶೀರ್ಷಶುಕ್ಲ ಪಂಚಮೀ ಭಾನುವಾರ ೪ನೇ ದಿನಾಂಕದ (04-12-2016) ಧನುರ್ಲಗ್ನದಲ್ಲಿ ನೆರವೇರಿಸಲು ಭಾವೀಪರ್ಯಾಯಪೀಠಾಧೀಶರಾದ ಶ್ರೀ ಶ್ರೀವಿದ್ಯಾಧೀಶತೀರ್ಥರು ಸಂಕಲ್ಪಿಸಿದ್ದಾರೆ. ತಮ್ಮ ದ್ವಿತೀಯ ಪರ್ಯಾಯದ ಪೂರ್ವಭಾವಿ ಈ ಮುಹೂರ್ತದಲ್ಲಿ ಸಕಲ ಶ್ರೀಕೃಷ್ಣಮುಖ್ಯಪ್ರಾಣಭಕ್ತರಿಗೆ ಆಹ್ವಾನ ನೀಡಿದ್ದಾರೆ. ಈ ಬಾಳೆಮುಹೂರ್ತದಲ್ಲಿ ನಾವೆಲ್ಲರೂ ಸೇರೋಣ. ಪೂಜ್ಯ ಶ್ರೀಪಲಿಮಾರು ಶ್ರೀಪಾದರ ಮುಂದಿನ ದ್ವಿತೀಯಪರ್ಯಾಯವು ನಿರ್ವಿಘ್ನವಾಗಿ ಯಶಃಪೂರ್ಣವಾಗಿ ನೆರವೇರಿ ಶ್ರೀಕೃಷ್ಣ-ಮುಖ್ಯಪ್ರಾಣರ ಅನುಗ್ರಹಸಿದ್ಧಿಯಾಗಿ ಲೋಕೋತ್ತರ ಕಲ್ಯಾಣವಾಗಲೆಂದು ನಾವೆಲ್ಲರೂ ಒಕ್ಕೊರಲಿನಿಂದ ಪ್ರಾರ್ಥಿಸೋಣ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.