Palimaru Akki Muhurta

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಅಕ್ಕಿ ಮುಹೂರ್ತ

ಭಾರತದ ಮೂರು ಪ್ರಮುಖ ವೈಷ್ಣವ ಕ್ಷೇತ್ರಗಳಾದ ಪಂಢರಪುರ, ತಿರುಮಲೆ ಹಾಗು ಉಡುಪಿಗಳು ಕ್ರಮವಾಗಿ ನಾದಬ್ರಹ್ಮ, ಕಾಂಚನಬ್ರಹ್ಮ ಮತ್ತು ಅನ್ನಬ್ರಹ್ಮ ಕ್ಷೇತ್ರಗಳೆಂದು ಪ್ರಸಿದ್ಧವಾಗಿವೆ. ಅನ್ನಬ್ರಹ್ಮನೆನಿಸಿದ ಶ್ರೀಕೃಷ್ಣನು ಮಧ್ವರಿಂದ ಪ್ರತಿಷ್ಠಿತನಾದವನು ಎಂದು ಎಲ್ಲರಿಗೂ ತಿಳಿದಿದೆ. ಅಷ್ಟಯತಿಗಳನ್ನು ನಿಯಮಿಸಿ ಅಷ್ಟಮಠಗಳನ್ನು ಸ್ಥಾಪಿಸಿ ಸರದಿಯ ಪ್ರಕಾರ ಪೂಜೆಗೆ ವ್ಯವಸ್ಥೆಯನ್ನು ಶ್ರೀಮಧ್ವರೇ ಮಾಡಿದ್ದು ಸಹ ತಿಳಿದ ವಿಷಯ. ಈ ವ್ಯವಸ್ಥೆಯು ವಿಶಿಷ್ಟವಾದ ಶಾಸ್ತ್ರಬದ್ಧವಾದ ಆಚರಣೆಗಳಿಂದ ಕೂಡಿದೆ. ಇದುವೇ ಸಂಪ್ರದಾಯ. ಈ ಸಾಂಪ್ರದಾಯಿಕ ನಡೆಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಮತ್ತು ಹೊಸ ಆಚರಣೆಗಳನ್ನು ಸೇರಿಸುವ ಅಧಿಕಾರ ಎಲ್ಲರಿಗೂ ಇಲ್ಲ. ಹಾಗೆ ಮಾಡುವುದಾದರೆ ಮಧ್ವರಂತೆಯೇ ಮಹಿಮೆಯುಳ್ಳವರು ಆಗಬೇಕು. ಅಲ್ಲದೆ ಆ ಬದಲಾವಣೆಗಳು ಅಥವಾ ಹೊಸ ರೂಢಿಗಳು ಮಧ್ವಸಮ್ಮತವೇ ಆಗಿರಬೇಕು. ಭಾವೀಸಮೀರರೆನಿಸಿದ ಶ್ರೀವಾದಿರಾಜತೀರ್ಥರು ಹೀಗೆ ಮಧ್ವಸಮ್ಮತವಾದ ಒಂದು ಮಹತ್ತರವಾದ ಬದಲಾವಣೆಯನ್ನೂ ಹಾಗು ಕೆಲವು ಹೊಸ ಆಚರಣೆಗಳನ್ನೂ ರೂಢಿಯಲ್ಲಿ ತಂದರು. ಮಧ್ವರು ರೂಪಿಸಿದ್ದ 2 ತಿಂಗಳ ಪರ್ಯಾಯಪೂಜಾ ಪದ್ಧತಿಯನ್ನು 2 ವರ್ಷಗಳಿಗೆ ಏರಿಸಿದ್ದೇ ಆ ಬದಲಾವಣೆ. ಆ ಬದಲಾವಣೆಯ ಪ್ರಕಾರ ಒಂದು ಆವೃತ್ತಿಯಲ್ಲಿ ಮಠವೊಂದಕ್ಕೆ 730 ದಿನಗಳ ಪೂಜಾಧಿಕಾರ ದೊರೆಯುತ್ತದೆ. ಈ 730 ದಿನಗಳ ಅವಧಿಯಲ್ಲಿ ಶ್ರೀಮಠದ ಒಟ್ಟಾರೆ ಆಯ ಹಾಗು ವ್ಯಯಗಳ ಹೊಣೆ ಪರ್ಯಾಯಮಠಕ್ಕೇ ಸೇರಿದ್ದು. ಸಾಮಾಜಿಕ ಹಾಗು ಸಾಧನೆಯ ನೆಲೆಗಟ್ಟಿನ ಮೇಲೆ ಅವರು ಅಂದು ಪುನಾರೂಪಿಸಿದ ಆ ವ್ಯವಸ್ಥೆಯು ವಾದಿರಾಜರ ನಂತರ ಇಲ್ಲಿಯವರೆಗೂ ಹಾಗೆಯೇ ಉಳಿದುಕೊಂಡು ಬಂದಿದೆ. ಇದು ಕೃಷ್ಣಮಠದಲ್ಲಿ ಸಂಪ್ರದಾಯಕ್ಕೆ ಇರುವ ಮಹತ್ವವನ್ನು ತೋರಿಸುತ್ತವೆ.

ಮಠವೊಂದರ ಪರ್ಯಾಯವು ಪೂರ್ಣಪ್ರಮಾಣದಲ್ಲಿ ಪ್ರಾರಂಭವಾಗುವ ಒಂದು ವರ್ಷ ಮೊದಲೇ ಕೆಲವು ಕಾರ್ಯಕ್ರಮಗಳು ಭಾವಿಪರ್ಯಾಯ ಮಠದಲ್ಲಿ ಆಯೋಜಿಸಲ್ಪಡುತ್ತವೆ. ಮುಂದೆ ಎರಡು ವರ್ಷಗಳ ಕಾಲ ನಿರಂತರವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಇವುಗಳು ಬೀಜರೂಪವಾಗಿ ಇರುತ್ತವೆ.

  1. ಪೂಜೆ ಹಾಗು ಅನ್ನಸಂತರ್ಪಣೆಗಾಗಿ ಬೇಕಾಗುವ ತುಳಸಿ ಹಾಗು ಬಾಳೆಯ ಎಲೆಗಳಿಗಾಗಿ ಬಾಳೆತೋಟವನ್ನು ನಿರ್ಮಿಸಲು ಸಾಂಕೇತಿಕವಾಗಿ ಬಾಳೆಮುಹೂರ್ತ (ಸಸ್ಯ ಮುಹೂರ್ತ)
  2. ಲಕ್ಷಾವಧಿ ಜನರ ಊಟಕ್ಕೆ ಬೇಕಾದ ಅಕ್ಕಿಯನ್ನು ಸಂಗ್ರಹಿಸಲು ಅಕ್ಕಿಮುಹೂರ್ತ
  3. ಇಂಧನ ಸಂಗ್ರಹಕ್ಕಾಗಿ ಕಟ್ಟಿಗೆಮುಹೂರ್ತ
  4. ಪರ್ಯಾಯದ ಎರಡನೆಯ ವರ್ಷದಲ್ಲಿ ಬೇಕಾಗುವ ಅಕ್ಕಿಗೆ ಬೇಕಾಗುವ ವ್ಯಾವಸಾಯಿಕ ಭತ್ತವನ್ನು ಸಂಗ್ರಹಿಸಲು ಭತ್ತಮುಹೂರ್ತ

ಇವುಗಳೇ ಆ ಕಾರ್ಯಕ್ರಮಗಳು. ಈ ಪದ್ಧತಿಯನ್ನು ಹಾಕಿಕೊಟ್ಟಿದ್ದು ಸಹ ಶ್ರೀವಾದಿರಾಜ ಗುರುಸಾರ್ವಭೌಮರೇ. ಮೇಲೆ ಹೇಳಿರುವ ಮುಹೂರ್ತಗಳು ಮೇಲ್ನೋಟಕ್ಕೆ ನೋಡಿದಾಗ ಊಟಕ್ಕೆ ಸಂಬಂಧಪಟ್ಟವು ಎಂದು ಥಟ್ಟನೆ ಊಹಿಸಬಹುದು. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಇವುಗಳಿಗೆ ಇರುವ ಶಾಸ್ತ್ರೀಯ ಮಹತ್ವ ಹಾಗು ಸಾಮಾಜಿಕ ಆಯಾಮಗಳು ಕೂಡ ಗೋಚರವಾಗುತ್ತವೆ.

ಉಡುಪಿಯ ಕೃಷ್ಣನು ಅನ್ನಬ್ರಹ್ಮನೆಂದು ಗೊತ್ತಾಯಿತಷ್ಟೇ. ಇದಕ್ಕೆ ಕಾರಣವಿದೆ.

ಸೂರ್ಯೋಽಗ್ನಿರ್ಬ್ರಾಹ್ಮಣೋ ಗಾವೋ ವೈಷ್ಣವಃ ಖಂ ಮರುಜ್ಜಲಮ್ |
ಭೂರಾತ್ಮಾ ಸರ್ವಭೂತಾನಿ ಭದ್ರ ಪೂಜಾಪದಾನಿ ಮೇ ||

ಎಂದು ಭಾಗವತದಲ್ಲಿ ಶ್ರೀಕೃಷ್ಣನು ಹೇಳುತ್ತಾನೆ. ಸೂರ್ಯ, ಅಗ್ನಿ, ಬ್ರಾಹ್ಮಣ, ಗೋವು, ವೈಷ್ಣವ, ಆಕಾಶ, ವಾಯು, ಜಲ, ಭೂಮಿ, ಆತ್ಮ ಹಾಗು ಸಕಲ ಜೀವರಾಶಿಗಳು ಭಗವಂತನ ಪ್ರತೀಕಗಳು. ಇವುಗಳಲ್ಲಿ ಅವನ ಆರಾಧನೆಯನ್ನು ಮಾಡಬೇಕು. ಎಲ್ಲರಿಗೂ ಎಲ್ಲ ಪ್ರತೀಕಗಳ ಪೂಜಾರಾಧನೆಯು ಸಾಧ್ಯವಾಗುವ ಕಾರ್ಯವಲ್ಲ. ಆದರೆ ಶ್ರೀಕೃಷ್ಣಮಠದಲ್ಲಿ ಈ ಎಲ್ಲ ಬಗೆಯಲ್ಲಿಯೂ ಭಗವದಾರಾಧನೆಯು ಎಂದೂ ನಿಲ್ಲದೆ ನಡೆಯುತ್ತಾ ಬಂದಿದೆ. ಆರಾಧನೆಯು ಯಾವ ಪ್ರತೀಕದಲ್ಲಿಯೇ ಇರಲಿ, ಅದು ಸಂಪನ್ನಗೊಳ್ಳುವುದು ಅನ್ನಸಂತರ್ಪಣೆಯಲ್ಲಿಯೇ. ಶ್ರೀಕೃಷ್ಣಮಠದಲ್ಲಿ ಭೋಜನರೂಪದ ಪ್ರಸಾದವನ್ನು ಸ್ವೀಕರಿಸುವವರ ಸಂಖ್ಯೆ ಅಗಣಿತ. ಒಂದು ಸಾಮಾನ್ಯ ಅಂದಾಜಿನ ಮೇಲೆ ಪ್ರತಿನಿತ್ಯ ಸಾವಿರಾರು ಭಕ್ತರು ಇಲ್ಲಿ ಊಟ ಮಾಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಈ ಸಾವಿರದ ಪಕ್ಕ ಇನ್ನೂ ಎರಡು ಸೊನ್ನೆಗಳು ಸೇರುವುದೂ ಉಂಟು. 16ವರ್ಷಗಳ ಕೆಳಗೆ ಪ್ರಾರಂಭಿಸಿದ ಚಿಣ್ಣರ ಸಂತರ್ಪಣೆಯ ಯೋಜನೆಯಡಿಯಲ್ಲಿ ಊಟ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೇ ಪ್ರತಿದಿನ 30000ಕ್ಕೂ ಮೀರುತ್ತದೆ. ಈ ಬೃಹತ್ ಪ್ರಮಾಣದ ಅನ್ನಸಂತರ್ಪಣೆಯನ್ನು ಅನ್ನಬ್ರಹ್ಮನಲ್ಲದೆ ಇನ್ನಾರು ಮಾಡಲು ಸಾಧ್ಯ?

ಅನ್ನಬ್ರಹ್ಮನ ಈ ಕಾರ್ಯಕ್ಕೆ ಅವನೇ ಆಯ್ಕೆ ಮಾಡಿಕೊಂಡಿರುವ ಸೇವಕರು ಈ ಅಷ್ಟಮಠದ ಯತಿಗಳು. ಇವರಾದರೂ ಸಮಾಜದ ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಈ ಮಹಾಯಜ್ಞವನ್ನು ಮಾಡುತ್ತಾರೆ. ಪರ್ಯಾಯವು ಪ್ರಾರಂಭವಾಗಲು ಸರಿಯಾಗಿ ಒಂದು ವರ್ಷ ಇದೆ ಎನ್ನುವಾಗ ಶುಭಮುಹೂರ್ತವೊಂದರಲ್ಲಿ ಭಾವೀಪರ್ಯಾಯ ಮಠದಲ್ಲಿ ಅಕ್ಕಿಯ ಸಂಚಯವು ಮೊದಲಾಗುತ್ತದೆ. ಶ್ರೀಕೃಷ್ಣದೇವರ ಎಲ್ಲ ಭಕ್ತರು, ಶ್ರೀಮಠದ ಶಿಷ್ಯವೃಂದ ಹಾಗು ಅಭಿಮಾನಿಗಳೆಲ್ಲರನ್ನೂ ಒಂದೆಡೆ ಸೇರಿಸಿ ಅವರೆಲ್ಲರ ಸಮ್ಮುಖದಲ್ಲಿ ಶ್ರೀಮಠದ ಧರ್ಮಾಧಿಕಾರಿಗಳು ಹರಿವಾಯುಗುರುಗಳ ಪ್ರಾರ್ಥನೆಯನ್ನು ಮಾಡುತ್ತಾರೆ. ಈ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ಅಕ್ಕಿಯ ಮುಡಿಯನ್ನು ತಯಾರಿಸಲಾಗುತ್ತದೆ. ಹದಿನಾಲ್ಕು ಸೇರಿನಷ್ಟು ಅಕ್ಕಿಯನ್ನು ಭತ್ತದ ಹುಲ್ಲಿನ ನಾರಿನಲ್ಲಿ ಚೆನ್ನಾಗಿ ಕಟ್ಟಿ ಈ ಮುಡಿಯನ್ನು ತಯಾರಿಸಲಾಗುತ್ತದೆ. ಈ ರೀತಿಯ 5 ಮುಡಿಗಳನ್ನು ಮಠದ ಪೂಜಾಮಂದಿರದ ಮುಂದೆ ಇರಿಸಿ, ದೇವರ ಪ್ರಾರ್ಥನೆಯನ್ನು ಮಾಡಿ ದೈವಜ್ಞರುಗಳಿಗೆ ಯಥೋಚಿತವಾದ ದಕ್ಷಿಣೆ ದಾನಗಳನ್ನು ಕೊಡಲಾಗುತ್ತದೆ. ಇದಾದ ನಂತರ ಚಂದ್ರಮೌಳೀಶ್ವರ, ಅನಂತೇಶ್ವರ ದೇಗುಲಗಳ ದರ್ಶನವನ್ನು ಮಾಡಿ, ಶ್ರೀಕೃಷ್ಣ-ಮುಖ್ಯಪ್ರಾಣರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿಕೊಂಡು ಶ್ರೀಮಠಕ್ಕೆ ಬರುತ್ತಾರೆ. ಬಂದು ಈ ಅಕ್ಕಿಯ ಮುಡಿಗಳ ಮಧ್ಯದಲ್ಲಿ ಶ್ರೀಮಠದ ಆರಾಧ್ಯದೇವರನ್ನಿರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ನಂತರ ಆ ಅಕ್ಕಿಯ ಮುಡಿಗಳನ್ನು ಪಲ್ಲಕ್ಕಿಯಲ್ಲಿ ಇರಿಸಿಕೊಂಡು ರಥಬೀದಿಯಲ್ಲಿ ಮೆರವಣಿಗೆ ಮಾಡಿಕೊಂಡು ಪುನಃ ಮಠಕ್ಕೆ ಬರುತ್ತಾರೆ. ಅಕ್ಕಿಯಮುಡಿಯ ಶೋಭಾಯಾತ್ರ್ರೆ ಆಗಿರದೆ, ಧಾನ್ಯದ ಅಂತರ್ಗತಶಕ್ತಿಯಾದ ಭಗವಂತನ ಶೋಭಾಯಾತ್ರೆಯೇ ಆಗಿರುತ್ತದೆ.

ನಂತರ ಪಲ್ಲಕ್ಕಿಯನ್ನು ತೆಗೆದುಕೊಂಡು ಹೋಗಿ ಇತರ ಏಳು ಮಠಾಧೀಶರನ್ನು ಆಹ್ವಾನಿಸಿ ಅವರ ಉಪಾಸ್ಯರಾದ ಮಧ್ವಕರಾರ್ಚಿತ ಪ್ರತಿಮೆಗಳನ್ನು ಪಲ್ಲಕ್ಕಿಯಲ್ಲಿ ಇರಿಸಿಕೊಂಡು, ಶ್ರೀಮಠಕ್ಕೆ ಕರೆತಂದು ಸಂಪ್ರದಾಯೋಕ್ತವಾಗಿ ಅವರನ್ನು ಉಪಚರಿಸಲಾಗುತ್ತದೆ. ನಂತರ ಅವರ ಸಮ್ಮುಖದಲ್ಲಿ ಆ ಅಕ್ಕಿಮುಡಿಯ ಅಂತಸ್ಸತ್ವನಾದ ಭಗವಂತನ ಪೂಜೆಯನ್ನು ಪ್ರಾರ್ಥನೆಯುಕ್ತವಾಗಿ ಮಾಡಲಾಗುತ್ತದೆ.

ಈ ಮೆರವಣಿಗೆಯ ನಂತರ ಶ್ರೀಮಠದಲ್ಲಿ ಧಾರ್ಮಿಕ ಸಭೆಯೊಂದನ್ನು ನಡೆಸಲಾಗುತ್ತದೆ. ಸಭೆಯಲ್ಲಿ ಉಪಸ್ಥಿತರಿರುವ ಎಲ್ಲ ಯತಿಗಳ ಆಶೀರ್ವಚನದ ಕಾರ್ಯಕ್ರಮವು ನಡೆಯುವುದು. ಅವರೆಲ್ಲರ ಶುಭಹಾರೈಕೆಗಳಿಗಾಗಿ ಪ್ರಾರ್ಥನೆ ಮಾಡಿ, ಕೊನೆಯಲ್ಲಿ ಬಂದ ಸಭಾಸದರಿಗೆ, ಅತಿಥಿಗಳಿಗೆ, ಭಕ್ತಾದಿಗಳಿಗೆ ಅನ್ನದಾನವನ್ನು ಮಾಡುವುದರ ಮೂಲಕ ಅಕ್ಕಿಮುಹೂರ್ತಕ್ಕೆ ತೆರೆ ಬೀಳುತ್ತದೆ. ಈ ಪೂಜೆಯ ಮುಕ್ತಾಯದ ನಂತರ ಅಕ್ಕಿಯ ಮುಡಿಯನ್ನು ಶ್ರೀಮಠದಲ್ಲಿ ದಾಸ್ತಾನು ಮಾಡಲಾಗುತ್ತದೆ. ಇಲ್ಲಿಂದ ಪರ್ಯಾಯಕ್ಕಾಗಿ ಅಕ್ಕಿ ಮೊದಲಾದ ಧಾನ್ಯಗಳನ್ನು ದಾನವಾಗಿ ಸ್ವೀಕರಿಸಲು ಅಧಿಕೃತವಾಗಿ ಮೊದಲಾಗುತ್ತದೆ. ಇದು ಅಕ್ಕಿಮುಹೂರ್ತದ ಸಂಕ್ಷಿಪ್ತ ಮಾಹಿತಿ.

ಶ್ರೀಮದಾಚಾರ್ಯರು ರೂಪಿಸಿರುವ ಪರ್ಯಾಯ ಪದ್ಧತಿಯ 31ನೆಯ ಆವೃತ್ತಿಯು 2018ರ ಜನೆವರಿ 17ಕ್ಕೆ ಮುಕ್ತಾಯಗೊಳ್ಳುತ್ತದೆ. ಮರುದಿನದ ಅಂದರೆ 2018  ಜನವರಿ 18ನೆ ದಿನಾಂಕದಂದು ಪಂಚಾಮೃತ ಅಭಿಷೇಕದ ಮೂಲಕ 32ನೆಯ ಆವೃತ್ತಿಯ ಮೊದಲ ಪರ್ಯಾಯವು ಮೊದಲ್ಗೊಳ್ಳುತ್ತದೆ. ಶ್ರೀಹೃಷೀಕೇಶತೀರ್ಥರ ಪರಂಪರೆಯಾದ ಶ್ರೀಪಲಿಮಾರು ಮಠಕ್ಕೆ ಆ ಒಂದು ಹೆಗ್ಗಳಿಕೆ. ಸರದಿಯ ಮೊದಲ ಮಠ ಇದು. ಅನ್ನಬ್ರಹ್ಮನ ಆರಾಧನೆಯಲ್ಲಿ ಚಿಣ್ಣರಸಂತರ್ಪಣೆಯಂತಹ ಹವಿಸ್ಸನ್ನು ಸೇರಿಸಿದ ಶ್ರೇಯಸ್ಸು ಶ್ರೀಪಲಿಮಾರು ಮಠದ್ದು. ಇತರ ಮಠಗಳ ಪರ್ಯಾಯದ ಅವಧಿಯಲ್ಲಿ ಈ ಶಾಲಾವಿದ್ಯಾರ್ಥಿಗಳ ಸಂಖ್ಯೆಯು ಅನೇಕ ಪಟ್ಟು ಹೆಚ್ಚಿದೆ. ಇದು ಅನ್ನಬ್ರಹ್ಮನ ಸೇವೆಗೆ ಇನ್ನೂ ಹೆಚ್ಚಿನ ಅವಕಾಶ ಎನ್ನುವ ಅಭಿಪ್ರಾಯದೊಂದಿಗೆ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಎರಡನೆಯ ಬಾರಿಗೆ ಸರ್ವಜ್ಞಪೀಠಾರೋಹಣವನ್ನು ಮಾಡಲಿದ್ದಾರೆ. ಈ ಸೇವೆಯ ಜೊತೆಗೆ ಆಚಾರ್ಯ ಮಧ್ವರ ಮೂಲ ಆಶಯವಾದ ಜ್ಞಾನಪ್ರಸಾರಕ್ಕೆ ಹೆಚ್ಚಿನ ಒತ್ತನ್ನು ನೀಡಿ ಅನೇಕ ವಿಧವಾದ ಜ್ಞಾನಕಾರ್ಯಗಳನ್ನು ಶ್ರೀಪಾದರು ಹಮ್ಮಿಕೊಂಡಿದ್ದಾರೆ. ಈ ಬಾರಿಯ ಧಾನ್ಯಮುಹೂರ್ತವೇ ಜ್ಞಾನಮುಹೂರ್ತವೂ ಆಗಲಿದೆ. ಅಕ್ಕಿ ಮುಹೂರ್ತದ ಸಭೆಯಲ್ಲಿಯೇ ಅಪರೂಪವಾದ ಏಳು ಹೊಸಗ್ರಂಥಗಳನ್ನು ಶ್ರೀಪಾದರು ತತ್ವಸಂಶೋಧನ ಸಂಸತ್ತಿನ ಮೂಲಕವಾಗಿ ಬಿಡುಗಡೆ ಮಾಡಲಿದ್ದಾರೆ.

ಮೊದಲು ಸಿಹಿಹೂರಣ, ಅದರ ಹಿಂದೆ ಜ್ಞಾನಪೂರಣ ಇದು ಶಾಸ್ತ್ರಕಾರರ ಕ್ರಮ. ಈ ಸಂಪ್ರದಾಯದ 32ನೆಯ ಆವೃತ್ತಿಗೆ ಎಲ್ಲರೂ ಸ್ವಾಗತ ಕೋರುವಾ.

ವಿ.ಸೂ. : ನಮ್ಮ ಶ್ರೀಪಲಿಮಾರುಮಠದ ಪರ್ಯಾಯಪೂರ್ವಭಾವಿ ಅಕ್ಕಿಮುಹೂರ್ತವು ಇದೇ ಬರುವ ಜನವರಿ-20-2017ರಂದು ನಡೆಯಲಿದೆ. ಸಕಲ ಭಕ್ತ-ಅಭಿಮಾನಿಗಳಿಗೆ ಆದರದ ಸ್ವಾಗತ. ಬನ್ನಿ ಎಲ್ಲರು ಜೊತೆಗೂಡಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಆಪುರೂಪದ ಅಕ್ಕಿಮುಹೂರ್ತಕ್ಕೆ ಸಾಕ್ಷಿ ಆಗುವ. ತನ್ಮೂಲಕ ಶ್ರೀರಾಮಕೃಷ್ಣ-ಮುಖ್ಯಪ್ರಾಣರ ಕೃಪೆಗೆ ಪಾತ್ರರಾಗೋಣ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.