ಪಲಿಮಾರು ಮಠದ ಪರಂಪರೆಯಲ್ಲಿ ಇಪ್ಪತ್ತನಾಲ್ಕನೆಯ ಯತಿಗಳು ಶ್ರೀಶ್ರೀರಘುಪ್ರವೀರ ತೀರ್ಥರು. ಅಪ್ರತಿಮಸಾಧಕರು, ತಪಸ್ವಿಗಳು. ಇವರು ಮೊದಲು ತಿರುಪತಿ ಯಾತ್ರೆಯನ್ನು ಮಾಡಿ ಮುಂದೆ ಆರಣಿ ಸಂಸ್ಥಾನದಲ್ಲಿ ಶಾಸ್ತ್ರಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದರು. ಪುನಃ ತಿರುಪತಿಗೆ ಹೋಗಿ ಧನ್ವಂತರಿ ರಾಮಾಚಾರ್ಯ ಮೊದಲಾದ ಖ್ಯಾತಪಂಡಿತರೊಂದಿಗೆ ವಾಖ್ಯಾರ್ಥವನ್ನು ಮಾಡಿ ಜಯಶೀಲರಾದರು. ಮಹಮ್ಮದ್ ರಾಜಾ ಎಂಬ ನವಾಬನು ಇವರಿಂದ ಪ್ರಭಾವಿತನಾಗಿ ಬೆಳ್ಳಿಯ ಶ್ವೇತಛತ್ರವನ್ನು ಸಮರ್ಪಣೆ ಮಾಡಿದನು.
ಇವರು ಹನ್ನೆರಡು ಬಾರಿ ಶ್ರೀಮನ್ನ್ಯಾಯಸುಧಾ ಪಾಠ ಹಾಗೂ ತಾತ್ಪರ್ಯಚಂದ್ರಿಕಾ ಪಾಠಗಳನ್ನು ಮಾಡಿದ್ದಾರೆ. ಗೀತಾಭಾಷ್ಯ, ತಂತ್ರಸಾರ ಸಂಗ್ರಹ, ತರ್ಕಮಿಮಾಂಸಾದಿಗಳ ಪಾಠ ಇವರ ಜೀವನದ ಮತ್ತೊಂದು ಸಾಧನೆ. ತಪಸ್ಸು, ಮಂತ್ರಶಕ್ತಿ, ಯೋಗಸಿದ್ಧಿ ಇವರ ಜೀವನದ ವೈಶಿಷ್ಟ್ಯಗಳು. ಇವರಿಂದ ಭಗವಂತನು ನಡೆಸಿದ ಅಧ್ಬುತಸಾಧನೆಗಳು ಹಲವು.
ಆಶ್ರಮಸ್ವೀಕಾರವನ್ನು ಮಾಡಿದ ಪ್ರಾರಂಭದಲ್ಲಿ ಶ್ರೀಪಾದಂಗಳವರು ಬಹಳ ದಡ್ಡರಾಗಿದ್ದರಂತೆ. ಮಾತೂ ಉಗ್ಗುತ್ತಿತ್ತಂತೆ. ಪೀಠಾಧಿಪತಿಗಳಾದ ಇವರ ಸ್ಥಿತಿಯನ್ನು ಕಂಡ ಜನರು ಇವರ ಬಗ್ಗೆ ಲಘುವಾಗಿ ಮಾತನಾಡಲು ಪ್ರಾರಂಭಿಸಿದರು. ಅದು ಶ್ರೀಪಾದರ ಮನಸ್ಸಿಗೆ ನೋವುಂಟುಮಾಡುತ್ತಿತ್ತು. ಆಗ ಸ್ವಾಮಿಗಳು ನೃಸಿಂಹ-ಪ್ರಾಣರ ಸನ್ನಿಧಾನವಿರುವ ಘಟಿಕಾಚಲಕ್ಕೆ ತೆರಳಿ ಒಂದು ಮಂಡಲ(೪೮ ದಿನಗಳು) ಕಾಲ ಸುಂದರಕಾಂಡ ಪಾರಾಯಣ ಮಾಡುತ್ತಾ ತಪಸ್ಸನ್ನಾಚರಿಸಿದರು.
೪೮ನೇ ದಿನ ರಾತ್ರಿ ಸ್ವಪ್ನದಲ್ಲಿ ಶ್ರೀ ಮುಖ್ಯಪ್ರಾಣದೇವರು ಒಂದು ಮಂಗನ ರೂಪದಲ್ಲಿ ಬಂದು ಇವರ ಬಾಯಲ್ಲಿ ಉಗುಳಿದ ಹಾಗೆ ಭಾಸವಾಯಿತು. ಅಷ್ಟೇ ಅಲ್ಲದೇ ನನ್ನದೊಂದು ಪ್ರತೀಕವು ಸರೋವರದಲ್ಲಿದೆ. ಅದನ್ನು ತೆಗೆದುಕೊಂಡು ಹೋಗಿ ಮಠದಲ್ಲಿ ಸ್ಥಾಪಿಸು ಎಂದು ಪ್ರಾಣದೇವರು ಆಜ್ಞಾಪಿಸಿದರು. ಮರುದಿವಸ ಸರೋವರದಲ್ಲಿ ಅವಗಾಹನಸ್ನಾನ ಮಾಡುವಾಗ ಸುಂದರವಾದ ಚತುರ್ಭುಜಧಾರಿಯಾದ ಘಟಿಕಾಚಲದಲ್ಲಿರುವ ಪ್ರಾಣದೇವರ ಪ್ರತಿರೂಪವಾದ ಒಂದು ಪ್ರತಿಮೆಯು ದೊರೆಯಿತು. ಆ ದಿನ ಶ್ರೀರಘುಪ್ರವೀರ ತೀರ್ಥರ ಜೀವನವನ್ನೇ ಬದಲಿಸಿದ ಶುಭದಿನ. ಯಾವ ದಿನದಂದು ಸತ್ಯಲೋಕದ ಒಡೆಯನಾದ ಪ್ರಾಣದೇವರು ಶ್ರೀರಘುಪ್ರವೀರತೀರ್ಥರಿಗೆ ಒಲಿದನೋ ಅಂದಿನಿಂದ ಶ್ರೀಪಾದಂಗಳವರು ನುಡಿದದ್ದೆಲ್ಲಾ ಸತ್ಯವಾಯಿತು. ಘಟಿಕಾಚಲದಲ್ಲಿ ಪ್ರಾಪ್ತವಾದ ಪ್ರಾಣದೇವರನ್ನು ತಂದು ಪಲಿಮಾರಿನ ಮೂಲಮಠದಲ್ಲಿ ಇರಿಸಿದರು. ಚತುರ್ಭುಜಧಾರಿಯಾಗಿ ಪದ್ಮಾಸನದಲ್ಲಿ ಕುಳಿತ ವಿಶಿಷ್ಟವಾದ ಭಂಗಿಯಲ್ಲಿರುವ ಪ್ರಾಣದೇವರನ್ನು ಪ್ರತಿಷ್ಠಾಪಿಸಿದರು. ಸಿದ್ಧಪುರುಷರಾದರು.
ಶ್ರೀಶ್ರೀರಘುಪ್ರವೀರತೀರ್ಥರ ಕರಕಮಲಸಂಜಾತನಾದ ಪ್ರಾಣದೇವನು ಅಂದಿನಿಂದ ನಿರಂತರವಾಗಿ ಮಠದಲ್ಲಿ ಆರಾಧಿತನಾಗಿ ಇಡೀ ಊರಿಗೆ ಆರಾಧ್ಯದೇವನಾದನು. ಶರಣಾಗತರಾದ ಭಕ್ತರ ಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಪ್ರದನಾದನು. ಇಂದಿಗೂ ಕೂಡ ಮಠದಲ್ಲಿ ಆರಾಧಿಸಲ್ಪಡುವ ಪ್ರಾಣದೇವರ ದರ್ಶನಕ್ಕಾಗಿ ಶನಿವಾರದಂದು ಸಹಸ್ರಾರು ಮಂದಿ ಭಕ್ತರು ಆಗಮಿಸುತ್ತಾರೆ. ವಾಯುಸ್ತುತಿಪುರಶ್ಚರಣೆ, ರಂಗಪೂಜೆ, ಮೊದಲಾದ ಸೇವೆಗಳಿಂದ ಭಕ್ತರು ಆತನ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ. ಭಕ್ತರ ಕರೆಗೆ ಸ್ಪಂದಿಸುವ ಬಲು ದೊಡ್ಡ ಸನ್ನಿಧಾನ ಪಲಿಮಾರಿನಲ್ಲಿ ನೆಲೆಸಿರುವ ಆಂಜನೇಯನದ್ದು. ಹೀಗೆ ಆಂಜನೇಯನನ್ನು ಒಲಿಸಿಕೊಂಡು ಸಿದ್ಧಪುರುಷರಾಗಿ ಪ್ರಸಿದ್ಧರಾದವರು ಶ್ರೀಶ್ರೀರಘುಪ್ರವೀರತೀರ್ಥರು.
ಪಲಿಮಾರುಮಠದ ಪರಂಪರೆಯಲ್ಲಿ ಬಂದ ಪ್ರಾತಃಸ್ಮರಣೀಯರಾದ ಶ್ರೀ ಶ್ರೀರಘುಪ್ರವೀರತೀರ್ಥರು ತೋರಿದ ಮತ್ತೊಂದು ಪವಾಡವು ಇಂತಿದೆ. ರಥಬೀದಿಯಲ್ಲಿ ಡೊಂಬರಾಟ ಆಡುವವನೊಬ್ಬನು ನಾನಾ ಆಟಗಳನ್ನು ತೋರಿಸಿ ಕೊನೆಗೆ ಒಂದು ಸವಾಲನ್ನು ಹಾಕಿದನು. ಅದೇನೆಂದರೆ ಈ ಆಟವು ಮುಗಿದ ಮೇಲೆ ನಾನು ಈ ಅನಂತೇಶ್ವರದೇವಾಲಯವನ್ನು ನುಂಗುತ್ತೇನೆ ಎಂದು. ಈ ವಿಷಯವನ್ನು ಕೇಳಿದ ಅಲ್ಲಿಯೇ ನೆರೆದಿದ್ದ ಕೆಲವು ಮಂದಿ ಮಠದ ಜಗಲಿಯಲ್ಲಿ ಕುಳಿತಿದ್ದ ಶ್ರೀರಘುಪ್ರವೀರತೀರ್ಥರಿಗೆ ಹೇಳಿದರು. ಆಗ ಶ್ರೀಪಾದರು ನಗುತ್ತಾ ತುಳುವಿನಲ್ಲಿ ಆಯೆ ಅನಂತೇಶ್ವರನ್ ನುಂಗುವೆನಾ. ಆತ್ ಪುಕುಳಿ ನುಂಗುವೆನಾ? ಎಂದು ತಮಾಷೆ ಮಾಡಿದರು.
ಸ್ವಲ್ಪಸಮಯದ ನಂತರ ತನ್ನ ಸವಾಲನ್ನು ಕೃತಿಗಿಳಿಸಲು ಆ ಡೊಂಬರಾಟದವನು ದೊಡ್ಡದಾಗಿ ಬಾಯಿಯನ್ನು ತೆರೆದು ನುಂಗುವವನಂತೆ ನಟನೆ ಮಾಡಲು ಆರಂಭಿಸಿದನು. ಆಗ ಅಲ್ಲಿ ನೆರೆದಿದ್ದ ಜನರೆಲ್ಲರು ಜೋರಾಗಿ ನಗಲು ಪ್ರಾರಂಭಿಸಿದರು. ಆಗ ಅವನಿಗೆ ಗೊತ್ತಾಯಿತು. ತಾನು ಮಾಡುತ್ತಿದ್ದ ಸಂಮೋಹಿನಿ ಆಟವು ತಿರುಗುಬಾಣವಾಗಿ ದೇವಾಲಯದ ಬದಲು ಕುಂಡೆಯನ್ನು ನುಂಗುತ್ತಿರುವಂತೆ ಪ್ರೇಕ್ಷಕರಿಗೆ ಕಾಣುತ್ತಿದೆ ಎಂಬುದಾಗಿ. ಅಪಮಾನದಿಂದ ಸಿಟ್ಟಾದ ಆತನಿಗೆ ಇದು ಸ್ವಾಮಿಗಳ ಕೆಲಸ ಎಂದು ಗೊತ್ತಾಯಿತು. ಆತ ಸ್ವಾಮಿಗಳಿಗೆ ಬುದ್ಧಿಯನ್ನು ಕಲಿಸಬೇಕೆಂದು ಸಂಕಲ್ಪಿಸಿದನು.
ಮರುದಿವಸ ಬೆಳಗ್ಗೆ ಪರ್ಯಾಯಮಠಾಧೀಶರಾದ ಶ್ರೀರಘುಪ್ರವೀರ ಸ್ವಾಮಿಗಳು ಸ್ನಾನಮಾಡಿ ತರ್ಪಣಕ್ಕೆ ಕುಳಿತರು. ಕೆಲವೇನಿಮಿಷಗಳಲ್ಲಿ ಅವರಿಗೆ ಮೂತ್ರದ ಶಂಕೆಯಾಯಿತು. ಎದ್ದುಹೋಗಿ ಮೂತ್ರವಿಸರ್ಜನೆ ಮಾಡಿ ಮತ್ತೆ ಸ್ನಾನ ಮಾಡಿ ಬಂದು ತರ್ಪಣವನ್ನು ಪ್ರಾರಂಭಮಾಡಿದರು. ಅವರಿಗೆ ಮತ್ತೆ ಶಂಕೆಯಾಯಿತು. ಹೀಗೆ ಸುಮಾರು ಹತ್ತಾರು ಸಲ ತರ್ಪಣಕ್ಕೆ ಮೂತ್ರಶಂಕೆಯು ಅಡ್ಡಿಯಾಯಿತು. ಈವರೆಗೆ ಇಲ್ಲದ ಈ ವಿಚಿತ್ರ ತೊಂದರೆಯಿಂದ ಶ್ರೀಗಳು ತುಂಬಾ ಚಿಂತಾಕ್ರಾಂತರಾದರು. ಆಗ ಯಾರೋ ಸ್ವಾಮಿಗಳಿಗೆ ’ಆ ಡೊಂಬರಾಟದವನು ಒಂದು ಹಳ್ಳದ ನೀರಿನಲ್ಲಿ ಮುಳುಗುತ್ತಾ ಬೊಗಸೆಯಲ್ಲಿ ನೀರೆತ್ತಿ ಅರ್ಘ್ಯವನ್ನು ಕೊಡುತ್ತಿದ್ದಾನೆ’ ಎಂದು ಶ್ರೀಗಳಿಗೆ ತಿಳಿಸಿದರು. ಆಗ ಶ್ರೀಗಳವರು ಕ್ಷಣ ಕಾಲ ಕಣ್ಣುಮುಚ್ಚಿಕೊಂಡು ಮಂತ್ರವನ್ನು ಪಠಿಸುತ್ತಾ, ಒಬ್ಬ ಸೇವಕನನ್ನು ಕರೆದು ತೋಟಕ್ಕೆ ಹೋಗಿ ಕತ್ತಿಯಿಂದ ಒಂದು ಬಾಳೆಗಿಡದ ತಲೆಯನ್ನು ಕಡಿದು ಬಾ ಎಂದರು.
ಅದಾದ ಮೇಲೆ ಶ್ರೀಪಾದದ ಮೂತ್ರಶಂಕೆಯು ನಿಂತುಹೋಯಿತು. ಕಡಿದ ಬಾಳೆದಿಂಡಿನಲ್ಲಿ ನೀರು ಉಕ್ಕಿ ಹರಿಯತೊಡಗಿತು. ಮುಂದೆ ಶ್ರೀಗಳವರು ನಿರ್ವಿಘ್ನವಾಗಿ ಸ್ನಾನ, ತರ್ಪಣ, ಪೂಜೆ, ಭಿಕ್ಷೆಗಳನ್ನೆಲ್ಲಾ ಸಾಂಗವಾಗಿ ನೆರವೇರಿಸಿದರು. ಮಠದಲ್ಲಿ ಊಟಮಾಡಿ ಬ್ರಾಹ್ಮಣರು ಮನೆಗೆ ಹೋಗುವ ಸಂದರ್ಭದಲ್ಲಿಯೂ ಆ ಡೊಂಬರಾಟದವನು ಹಳ್ಳದ ನೀರಿನಲ್ಲಿ ಮುಳುಗಿ ಅರ್ಘ್ಯವನ್ನು ಕೊಡುತ್ತಾ ಇದ್ದನು. ಅವನನ್ನು ನೋಡಿದ ಬ್ರಾಹ್ಮಣರು ಶ್ರೀಗಳವರು ನಿರ್ವಿಘ್ನವಾಗಿ ಸ್ನಾನ-ಪೂಜಾದಿಗಳನ್ನು ನೆರವೇರಿಸಿದರು ಎಂದು ಅವನಿಗೆ ತಿಳಿಸಿದರು. ಆಗ ಆತನು ತನ್ನ ಪ್ರಯೋಗವನ್ನು ಶ್ರೀಗಳು ಎದುರಿಸಿದ ರೀತಿಯನ್ನು ತಿಳಿದು ಸೋತು ಪಶ್ಚಾತ್ತಾಪವನ್ನು ಪಟ್ಟು ಶ್ರೀಗಳವರಿಗೆ ಶರಣಾಗತನಾಗಿ ಕ್ಷಮೆಯನ್ನು ಯಾಚಿಸಿದನು.
ಶ್ರೀಪಾದಂಗಳವರು ತೋರಿದ ಮತ್ತೊಂದು ಪವಾಡವೆಂದರೆ ಇವರ ಪರ್ಯಾಯದ ಸಂದರ್ಭದಲ್ಲಿ ಕೃಷ್ಣದೇವರ ನಿತ್ಯದ ಪಂಚಾಮೃತಅಭಿಷೇಕಕ್ಕೆ ಮಠದ ನರ್ಮದೆ ಎಂಬುವಂತಹ ಹಸುವು ಹಾಲನ್ನು ಕೊಡುತ್ತಿತ್ತು. ಇದು ಶ್ರೀಪಾದರಿಗೆ ಅತ್ಯಂತಪ್ರಿಯವಾದ ಹಸು. ಶ್ರೀಪಾದರ ತಪಸ್ಸು ಎಷ್ಟಿತ್ತೆನ್ನುವುದಕ್ಕೆ ಸಾಕ್ಷಿಯೇ ಈ ಘಟನೆ.
ಒಂದು ದಿವಸ ಹುಲ್ಲುಮೇಯಲು ಹೋದ ನರ್ಮದೆಯು ರಾತ್ರಿಯಾದರೂ ಹಟ್ಟಿಗೆ ಹಿಂತಿರುಗಲಿಲ್ಲ. ಮರುದಿವಸ ಪಂಚಾಮೃತಾಭಿಷೇಕಕ್ಕೆ ಹಾಲು ಬರದೇ ಇದ್ದಾಗ ಆ ಹಸುವನ್ನು ಹುಲಿಯೊಂದು ಕೊಂದಿರುವ ವಿಚಾರವು ಶ್ರೀಪಾದರಿಗೆ ಗೊತ್ತಾಯಿತು. ಆ ವಿಷಯವು ಶ್ರೀಪಾದರಿಗೆ ತುಂಬಾ ವ್ಯಥೆಯನ್ನು ಉಂಟುಮಾಡಿತು. ಆಗ ಶ್ರೀಪಾದರು ಪದ್ಮಾಸನವನ್ನು ಹಾಕಿ ಕುಳಿತು ಪೂಜೆಗೂ ಏಳದೇ ಧ್ಯಾನಮಗ್ನರಾದರು. ಕೊನೆಗೆ ಎಲ್ಲಿಯೋ ಇದ್ದ ಆ ಹುಲಿಯು ಓಡಿ ಬಂದು ಶ್ರೀಕೃಷ್ಣಮಠದ ಮಹಾದ್ವಾರದ ಬಳಿಗೆ ಬಂದು ವಿಲವಿಲನೆ ಒದ್ದಾಡಿ ಪ್ರಾಣಬಿಟ್ಟಿತು. ಅನಂತರವೇ ಶ್ರೀಪಾದರು ಸ್ನಾನಕ್ಕಿಳಿದು ಪೂಜಾದಿಗಳನ್ನು ನೆರವೇರಿಸಿ ಭಿಕ್ಷೆಯನ್ನು ಸ್ವೀಕರಿಸಿದರು. ಈ ಘಟನೆಯ ನಂತರ ಶ್ರೀಪಾದರನ್ನು ಜನರು ಹುಲಿ ಕೊಂದ ಸ್ವಾಮಿಗಳು(ಪಿಲಿ ಕೆರ್ತಿ ಸ್ವಾಮುಳು) ಎಂದು ಕರೆಯತೊಡಗಿದರು. ಈ ಹೆಸರು ಇಂದಿಗೂ ಕೂಡಾ ಎಷ್ಟು ಪ್ರಸಿದ್ಧವೆಂದರೆ ಅವರ ಮೂಲಹೆಸರೇ ಎಷ್ಟೋ ಮಂದಿಗೆ ಗೊತ್ತಿಲ್ಲದಿದ್ದಷ್ಟು.
ಹೀಗೆ ತನ್ನ ತಪೋಬಲದಿಂದ ಅನೇಕಮಹಿಮೆಗಳನ್ನು ತೋರಿದಂತಹ ಶ್ರೀಪಾದಂಗಳವರು ನಾಲ್ಕುದಶಕಗಳ ಕಾಲ ಶ್ರೀರಾಮಚಂದ್ರನ ಹಾಗೂ ಪ್ರಾಣದೇವರ ಆರಾಧನೆಯನ್ನು ನಿರ್ಮಲವಾದ ಭಕ್ತಿಯಿಂದ ಮಾಡಿ ಶಾಲಿವಾಹನ ಶಕ ೧೭೧೮(ಕ್ರಿ.ಶ ೧೭೯೫) ನೇ ರಾಕ್ಷಸಸಂವತ್ಸರದ ಶ್ರಾವಣ ಬಹುಳ ಬಿದಿಗೆಯಂದು ಉಡುಪಿ ಶ್ರೀಕೃಷ್ಣನ ಸನ್ನಿಧಾನದಲ್ಲಿಯೇ ಆತನ ಪಾದವನ್ನು ಸೇರಿದರು. ಅವರ ವೃಂದಾವನವು ಕೃಷ್ಣಮಠದ ಬಲಭಾಗದಲ್ಲಿರುವ ವೃಂದಾವನಗಳ ಮಧ್ಯದಲ್ಲಿದೆ. ಇಂತಹ ತಪಸ್ವಿಗಳಿಗೆ ಪುನಃ ಪುನಃ ಅನಂತಸಾಷ್ಟಾಂಗಪ್ರಣಾಮಗಳು.