Skip to main content
x

ದೇವರನ್ನೊಪ್ಪದ ರಾಜಕೀಯಕ್ಕೆ ಏಳ್ಗೆಯಿಲ್ಲ

“ಓ ರಾಜನೇ! ಸಮುದ್ರ ದಾಟಲು ನೌಕೆಯಿದ್ದಂತೆ ಸಂಸಾರ ಸಮುದ್ರ ದಾಟಲಿರುವ ಒಂದೇ ಒಂದು ಉಪಾಯ ಭಗವಂತನ ಜ್ಞಾನ ಮಾತ್ರವೇ.  ಅದನ್ನು ನೀನು ಅರಿತಿಲ್ಲ.”

ಏಕಮೇವಾದ್ವಿತೀಯಂ ತದ್ಯದ್ರಾಜನ್ನಾವಬುಧ್ಯಸೇ |
ಸತ್ಯಂ ಸ್ವರ್ಗಸ್ಯ ಸೋಪಾನಂ ಪಾರಾವಾರಸ್ಯ ನೌರಿವ ||
– (ಭಾರತ-ವಿದುರನೀತಿ)

ಹಲವಾರು ಚಿಂತಕರ ಚಿಂತನೆಯ ಹಳಿ ತಪ್ಪುವಂತೆ ಮಾಡಿದ ಶಾಸ್ತ್ರದ ಬಹು ಹಿರಿದಾದ ಸಂಗತಿಯಿದು. ಮೇಲಿರುವ ವಿದುರನ “ಏಕಮೇವಾದ್ವಿತೀಯಂ”ಎನ್ನುವ ಮಾತನ್ನು ದೂರದಲ್ಲೇ ನಿಂತು ಮೇಲ್ನೋಟದಿಂದ ಇಣುಕಿದಾಗ ಅಪಾರ್ಥಗೊಳ್ಳುವ ಸಂದರ್ಭವೇ ಹೆಚ್ಚು. ಸ್ವಲ್ಪ ಪ್ರಾಮಾಣಿಕವಾಗಿ ಯೋಚಿಸಿದಾಗ ಸತ್ಯ ತೆರೆದುಕೊಳ್ಳುವುದು.

ಏಕಮೇವ ಅದ್ವಿತೀಯಂ ಎಂದರೆ ಒಂದೇ ಒಂದು. ಎರಡಿಲ್ಲದ್ದು ಎನ್ನುವ ಅರ್ಥ ಸಹಜವಾಗಿಯೇ ಆಗುವಂಥದ್ದು. ಇದೊಂದೇ ಸತ್ಯ. ಹೀಗೆ ಹೇಳಿದ ಮಾತ್ರಕ್ಕೆ ಉಳಿದ ಸಂಗತಿಗಳು ಸುಳ್ಳೆಂದಾಗಲಿಲ್ಲ. ಇರುವ ಸಂಗತಿಯೂ ಅದೊಂದೇ ಎಂದೂ ಆಗಲಿಲ್ಲ. ಸ್ವಲ್ಪ ಯೋಚಿಸಿ. ಭಗವಂತನೊಬ್ಬನೇ ಸತ್ಯ, ಉಳಿದ ಸಂಗತಿಗಳು ಸುಳ್ಳಾದರೆ ಬ್ರಹ್ಮನಿಗಿಂತ(ದೇವರಿಗಿಂತ) ಬೇರೆ ಇರುವುದೆಲ್ಲ ಸುಳ್ಳಾದರೆ ‘ಏಕಮೇವ’ ಎಂದಷ್ಟೇ ಹೇಳಿದರೆ ಸಾಕಲ್ಲವೇ? “ಬೇರೆ ಇಲ್ಲ(ಅದ್ವಿತೀಯಂ)” ಎನ್ನುವ ಮಾತೇಕೆ ಬೇಕು.?

ಹಾಗಾದರೆ ಈ ಮಾತಿಗೆ ಅರ್ಥವೇನು? ಶಾಸ್ತ್ರದ ಈ ಚಿಂತನೆಗೆ ಆಚಾರ್ಯ ಮಧ್ವರು ಹಲವಾರು ರೀತಿಯಲ್ಲಿ ಉತ್ತರಿಸಿರುವರು. ಏಕಮೇವ ಎಂದರೆ ಸರ್ವಸಮರ್ಥನಾದ(ಏಷ ಏವ ಕರೋತೀತಿ ಏಕಃ) ಭಗವಂತನು. ಅದ್ವಿತೀಯಂ ಎಂದರೆ ಈ ಭಗವಂತನಿಗೆ ಸರಿಸಾಟಿಯಾದ ಸಂಗತಿ ಇನ್ನೊಂದಿಲ್ಲವೇ ಇಲ್ಲ ಎಂದು ಅರ್ಥ. ಉಳಿದ ಎಲ್ಲವು ಸುಳ್ಳಲ್ಲ. ಅವೆಲ್ಲವೂ ಸರ್ವಸಮರ್ಥನಾದ ಭಗವಂತನ ಅಧೀನವಾಗಿವೆ. ಇದೇ ಸತ್ಯ ಸಂಗತಿ. ಇದು “ಏಕಮೇವ ಅದ್ವಿತೀಯಂ”ಎನ್ನುವ ಶಾಸ್ತ್ರದ ಚಿಂತನೆಯ ಅರ್ಥವಾಗಿದೆ.

ವಿದುರ ಧೃತರಾಷ್ಟ್ರನಿಗೆ ಹೇಳುತ್ತಾನೆ. “ನೋಡು ಧೃತರಾಷ್ಟ್ರ! ಸರ್ವಸಮರ್ಥನೆನಿಸಿದ ಆ ಪರತತ್ವ ಕೃಷ್ಣರೂಪದಿಂದ ಭುವಿಗಿಳಿದು ಪಾಂಡವರ ಪಕ್ಷದಲ್ಲಿ ಕೂತಿದೆ. ಈ ಸಂಗತಿಯನ್ನು ಮರೆತು ನೀವು ದಾರಿ ತಪ್ಪಿರುವಿರಿ. ನಿನ್ನ ಮಕ್ಕಳಂತೂ ಮೂರ್ಖ ಶಿಖಾಮಣಿಗಳು. ನೀನಾದರೂ ಇದನ್ನು ಅರ್ಥೈಸಿಕೊ. ಮೋಕ್ಷಕ್ಕೆ ಅವನ ಆರಾಧನೆಯ ಹೊರತಾಗಿ, ಅವನ ಜ್ಞಾನದ ಹೊರತಾಗಿ ಬೇರೆ ದಾರಿಯು ಇಲ್ಲವೇ ಇಲ್ಲ”.

ದೇವರನ್ನು ಒಪ್ಪದ ರಾಜಕೀಯ ಎಂದೂ ಏಳ್ಗೆಯನ್ನು ಕಾಣುವುದಿಲ್ಲ ಎನ್ನುವ ಮಾರ್ಮಿಕವಾದ ಉಪದೇಶ ವಿದುರನದ್ದಾಗಿದೆ. ಕೊನೆಗೆ ಹಾಗೆಯೇ ಆಯಿತೂ ಕೂಡ.

“ಜ್ಞಾನೇನೈವ ಪರಂ ಪದಮ್”ಎನ್ನುವ ಸಿದ್ಧಾಂತ ಇಲ್ಲಿ ಎದ್ದು ಕಾಣಿಸುತ್ತದೆ.

 

ಪರಮಾದ್ಭುತ ನಾವಿಕನ ಚಿತ್ರದ ಕೃಪೆ : ಪರ್ಯಾಯ ಶ್ರೀಪೇಜಾವರ ಮಠ