ಸಂಪತ್ತಿದ್ದೂ ದಾನ ಮಾಡದ ಪಿಟ್ಟಾಸಿಯಿಂದ ಸಮಾಜಕ್ಕೇನೂ ಉಪಾಯೋಗವಿಲ್ಲ. ಹಾಗಾಗಿ ಅವನಿರುವುದಕ್ಕಿಂತ ಇಲ್ಲದಿರುವುದೇ ವಾಸಿ. ದಾರಿದ್ರ್ಯ ಎನ್ನುವುದು ಹಲವು ಬಗೆಯದ್ದು.
ಇವರಿಬ್ಬರ ಕುತ್ತಿಗೆಗೊಂದು ಭಾರದ ಕಲ್ಲನ್ನು ನೇತು ಹಾಕಿ ನೀರಲ್ಲಿ ಮುಳುಗಿಸಬೇಕು. ಒಬ್ಬ ಸಾಕಷ್ಟು ಸಂಪತ್ತಿದ್ದು ಇಲ್ಲದವರಿಗೆ ಕೈ ಎತ್ತಿ ಕೊಡದವ. ಇನ್ನೊಬ್ಬ ದರಿದ್ರನಾಗಿಯೂ ತಪಸ್ಸಾಚರಿಸದವ.
ದ್ವಾವಂಭಸಿ ನಿವೇಷ್ಟವ್ಯೌ ಗಲೇ ಬಧ್ವಾ ಧೃಢಾಂ ಶಿಲಾಮ್ |
ಧನವಂತಮದಾತಾರಂ ದರಿದ್ರಂ ಚಾತಪಸ್ವಿನಾಮ್ ||
– (ಭಾರತ-ವಿದುರನೀತಿ)
ಸಂಪತ್ತಿದ್ದೂ ದಾನ ಮಾಡದ ಪಿಟ್ಟಾಸಿಯಿಂದ ಸಮಾಜಕ್ಕೇನೂ ಉಪಾಯೋಗವಿಲ್ಲ. ಹಾಗಾಗಿ ಅವನಿರುವುದಕ್ಕಿಂತ ಇಲ್ಲದಿರುವುದೇ ವಾಸಿ. ದಾರಿದ್ರ್ಯ ಎನ್ನುವುದು ಹಲವು ಬಗೆಯದ್ದು. ಅದಕ್ಕೆಲ್ಲ ಕಾರಣವನ್ನು ಒಂದೇ ಮಾತಿನಿಂದ ಹೇಳುವುದಿದ್ದರೆ ಜನ್ಮಾಂತರದಲ್ಲಿ ನಾವಾಚರಿಸಿದ ಕೆಟ್ಟ ಕರ್ಮ. ಇದರಿಂದ ಪಾರಾಗಲಿರುವ ಒಂದೇ ಒಂದು ಉಪಾಯ ಅದು ತಪಸ್ಸು. ಅಂದರೆ ಭಗವದಾರಾಧನೆ. ದರಿದ್ರನಾಗಿ ಇಷ್ಟೂ ಬುದ್ಧಿ ಬರದಿದ್ದರೆ ಆತ ಮೂರ್ಖನೇ ಸರಿ ಎನ್ನುವ ಆಶಯ ವಿದುರನದ್ದು.
ದಾರಿದ್ರ್ಯಗಳಲ್ಲೇ ಅತೀ ಹೆಚ್ಚಿನ ದಾರಿದ್ಯವೆಂದರೆ ಜ್ಞಾನದ ದಾರಿದ್ರ್ಯ. ಇದರ ನಿವಾರಣೆಗೂ ತಪಸ್ಸೇ ಗತಿ. ಇಲ್ಲಿ ತಪಸ್ಸೆಂದರೆ ಓದಿನ ಸಮಯದಲ್ಲೊಂದು ನಿಯಮದ ಬದುಕು ಹಾಗೂ ಯಾವುದೇ ವಿಷಯದ ಬಗೆಗೆ ಆಳವಾದ ಆಲೋಚನೆ. ಯಾವುದೇ ಓದಿರಲಿ ಅದರ ಬಗೆಗೆ ಆಳವಾಗಿ ಚಿಂತಿಸಬೇಕು. ನಿರಂತರ ಮನನ ಬೇಕು.
ಇವತ್ತಂತು ಈ ರೀತಿಯ ಅಧ್ಯಯನ ಯಾವ ಕ್ಷೇತ್ರದಲ್ಲೂ ಇಲ್ಲವಾಗಿದೆ. ಎಲ್ಲ ಬಗೆಯ ಓದೂ ಕೇವಲ ದುಡ್ಡು ಒಟ್ಟು ಮಾಡುವ ದಂಧೆಯಾಗಿ ಕೂತಿದೆ. ಹಾಗಾಗಿ ಎಲ್ಲ ಕ್ಷೇತ್ರಗಳೂ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಹೀಗಾಗಬಾರದು. ನಾವಾಚರಿಸುವ ಯಾವುದೇ ಕರ್ಮವಿರಲಿ ಅದರ ಬಗೆಗೆ ಕನಿಷ್ಟ ಮಟ್ಟದ ಜ್ಞಾನವಾದರೂ ಇರಲೇಬೇಕು ಎನ್ನುವ ಆದೇಶ ವ್ಯಾಸರದ್ದು.
– ಕೃಷ್ಣಸಖ,ಮುದರಂಗಡಿ.
ಚಿತ್ರಕೃಪೆ : https://srimadbhagavatamblog.wordpress.com/